ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಇದೀಗ ಭಾರೀ ಗದ್ದಲದಿಂದ ಕೂಡಿದೆ. ಒಮ್ಮೆ ಅತ್ಯಂತ ಆಪ್ತ ಸ್ನೇಹಿತರಾಗಿದ್ದ ಗಿಲ್ಲಿ ನಟ (Gilli Nata) ಹಾಗೂ ರಘು ಅವರ ನಡುವಿನ ಬಾಂಡಿಂಗ್ ಈಗ ಪೂರ್ತಿ ಒಡೆದು ಹೋಗಿದೆ. ಇದಕ್ಕೆ ಮುಖ್ಯ ಕಾರಣವೇ ರ್ಯಾಂಕಿಂಗ್ ಟಾಸ್ಕ್ ಮತ್ತು ಮನೆಕೆಲಸದ ಆರೋಪಗಳು.
ಟಾಸ್ಕ್‌ನಲ್ಲಿ ಸ್ಪರ್ಧಿಗಳು ಒಬ್ಬರಿಗೊಬ್ಬರು 1ರಿಂದ 11ರವರೆಗೆ ರ‍್ಯಾಂಕ್ ನೀಡಬೇಕಿತ್ತು. ಧನುಷ್ ಗಿಲ್ಲಿಗೆ ಎರಡನೇ ಸ್ಥಾನ ನೀಡಿ, “ನಿನ್ನ ವಿಷಯಕ್ಕೆ ಬಂದಾಗ ನೀನು ಸ್ಟ್ಯಾಂಡ್ ತಗೊಂಡ್ಬಿಡ್ತೀಯಾ ಅನ್ಸುತ್ತೆ” ಎಂದು ಕಾಮೆಂಟ್ ಮಾಡಿದರು. ಈ ಮಾತು ರಕ್ಷಿತಾ ಹಾಗೂ ರಘು ಅವರಿಗೆ ಸಿಡಿಮಡ್ಡಿನಂತೆ ಬಡಿದಿದೆ.
ರಕ್ಷಿತಾ ತಕ್ಷಣ ಆಕ್ರೋಶ ವ್ಯಕ್ತಪಡಿಸಿ, “ಗಿಲ್ಲಿ ಮನೆಕೆಲಸದಲ್ಲಿ ಏನೇ ನಿಭಾಯಿಸಲ್ಲ, ಯಾವಾಗಲೂ ತಪ್ಪಿಸಿಕೊಳ್ಳುತ್ತಾನೆ” ಎಂದು ಆರೋಪಿಸಿದರು. ರಘು ಕೂಡ, “ಮನೆಯಲ್ಲಿ ಶುದ್ಧ ಸೋಮಾರಿ ಅವನೇ! ಆದರೂ ಎರಡನೇ ಸ್ಥಾನದಲ್ಲಿ ಇದ್ದಾನಲ್ಲಾ?” ಎಂದು ಕಿಡಿ ಕಾರಿದರು.
ಈ ಎರಡೂ ಆರೋಪಗಳು ಗಿಲ್ಲಿಯನ್ನು ತೀವ್ರ ಕೆರಳಿಸಿದವು. ಧಿಡೀರನೆ ಗಿಲ್ಲಿ, “ಯಾರಾದರೂ ಕೇಳಿದ್ರೆ ಮನೆಕೆಲಸ ಅಂತಲೇ ಕಾರಣ ಹೇಳ್ತಾರೆ! ಏನು ಮನೆಕೆಲಸ ಮಾಡೋಕೆನಾ ನಾನು ಬಿಗ್ ಬಾಸ್ ಮನೆಗೆ ಬಂದಿದ್ದು? ನಾನು ಗೇಮ್ ಆಡೋಕೆ ಬಂದಿದ್ದೀನಿ!” ಎಂದು ಗರಂ ಆಗಿ ಕೂಗಾಡಿದರು.
ಗಿಲ್ಲಿಯ ಈ ಪ್ರತಿಕ್ರಿಯೆ ರಘುವನ್ನು ಇನ್ನಷ್ಟು ರೇಗಿಸಿತು. “ಮಾತಾಡಬೇಡ ” ಎಂದು ರಘು ಕೂಡ ಗಟ್ಟಿಯಾಗಿ ಕೂಗಿ ಬಿಟ್ಟರು. ಒಡನಾಡಿಗಳಾಗಿದ್ದ ಇಬ್ಬರ ನಡುವೆ ಇದೀಗ ತೀವ್ರ ಉದ್ವಿಗ್ನತೆ ಉಂಟಾಗಿದೆ. ಗಿಲ್ಲಿ ಮಾಡುತ್ತಿದ್ದ ಕೀಟಲೆಗಳನ್ನು ರಘು ಇದುವರೆಗೂ ಸಹಿಸಿಕೊಂಡಿದ್ದರು. ಆದರೆ ಈ ಘಟನೆಯಿಂದ ಎಲ್ಲವೂ ಬದಲಾಗಿ ಹೋಯಿತು.
ಈಗಾಗಲೇ ಇವರಿಬ್ಬರ ನಡುವೆ ಬಟ್ಟೆ ವಿಚಾರಕ್ಕೂ ಒಮ್ಮೆ ಭಾರೀ ಜಗಳ ನಡೆದಿತ್ತು. ಮ್ಯಾಕ್ಸಿ ಮಂಜು ಗಿಲ್ಲಿಯ ಬಟ್ಟೆ-ಶೂಗಳನ್ನು ನೋಡಿ, “ಇಷ್ಟೊಂದು ಚೆನ್ನಾಗಿ ಬಟ್ಟೆಗಳಿದ್ದರೂ ಯಾಕೆ ಹಾಕಿಕೊಳ್ಳುವುದಿಲ್ಲ?” ಎಂದು ಪ್ರಶ್ನಿಸಿದ್ದರು. ಅದಕ್ಕೆ ಗಿಲ್ಲಿ ಮಂಜು ಅವರ ಬಾಸ್ಕೆಟ್‌ನಲ್ಲಿರುವ ಬಟ್ಟೆಗಳನ್ನು ಹೊರಗೆ ತೆಗೆದು ತೋರಿಸಿದ್ದರು.
ಆದರೆ ರಘು ಆಗಲೇ ಬೇಸರ ವ್ಯಕ್ತಪಡಿಸಿ, “ಎರಡು ವಾರದಿಂದ ಬಟ್ಟೆ ಕಳಿಸುತ್ತಿದ್ದೇವೆ. ಮೊದಲು ‘ಬಟ್ಟೆ ಇಲ್ಲ’ ಅಂತ ಗೋಗರೆಯುತ್ತಿದ್ದ. ಈಗ ಕೊಟ್ಟ ಮೇಲೆ ಕ್ಯಾಮೆರಾ ಮುಂದೆ ಚೆನ್ನಾಗಿ ಕಾಣಿಸಿಕೋ ಅಂತ ಹೇಳಿದ್ದೀವಿ. ಆದರೂ ಕೇಳುತ್ತಿಲ್ಲ. ಇನ್ಮೇಲೆ ಬಟ್ಟೆ ಬಂದರೂ ಹಾಕಿಕೊಳ್ಳಲಿ ಅಥವಾ ಬಿಟ್ಟುಬಿಡಲಿ” ಎಂದು ಆಗಲೇ ಎಚ್ಚರಿಕೆ ನೀಡಿದ್ದರು.
ಗಿಲ್ಲಿ ಈಗ ಬಿಗ್ ಬಾಸ್ ಮನೆಯಲ್ಲಿ ಏಕಾಏಕಿ ಟಾರ್ಗೆಟ್ ಆಗಿದ್ದಾರೆ. ಧನುಷ್‌ನ ರ್ಯಾಂಕಿಂಗ್, ರಕ್ಷಿತಾ-ರಘುವಿನ ಆಕ್ರೋಶ, ಮನೆಕೆಲಸದ ಆರೋಪ, ಬಟ್ಟೆ ಗೊಡವೆ ಎಲ್ಲವೂ ಗಿಲ್ಲಿ ವಿರುದ್ಧವೇ ತಿರುಗಿಬಿದ್ದಿವೆ.





