‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ ನಟನ ಹಾಸ್ಯ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಆಟದ ಗಂಭೀರತೆಯನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗಿನ ಕಾಯಿನ್ ಟಾಸ್ಕ್‌ನಲ್ಲಿ ಗಿಲ್ಲಿಯ ವರ್ತನೆಗೆ ಸಹ ಸ್ಪರ್ಧಿ ಕಾವ್ಯಾ ಶೈವ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಿಲ್ಲಿಯ ಹಾಸ್ಯ ಆಟಕ್ಕೆ ಎಷ್ಟು ಪರಿಣಾಮ ಬೀರಬಹುದು ಎಂಬ ಬಗ್ಗೆ ಚರ್ಚೆಗೆ ಕಾರಣವಾಗಿದೆ.
‘ಬಿಗ್ ಬಾಸ್ ಕನ್ನಡ 12’ ಆರಂಭದಲ್ಲಿ ಗಿಲ್ಲಿ ನಟ ತಮ್ಮ ಒಳ್ಳೆಯ ಆಟದ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು. ಕಿಚ್ಚ ಸುದೀಪ್ ಮೊದಲ ಚಪ್ಪಾಳೆಯನ್ನು ಕರ್ನಾಟಕದ ಜನತೆಗೆ ನೀಡಿದರೆ, ಎರಡನೇ ಚಪ್ಪಾಳೆ ಗಿಲ್ಲಿಗೆ ಸಿಕ್ಕಿತು. ರಕ್ಷಿತಾ ಶೆಟ್ಟಿಗೆ ಅನ್ಯಾಯವಾದಾಗ ಅವರ ಪರವಾಗಿ ನಿಂತ ಗಿಲ್ಲಿ.
ಬಿಗ್ ಬಾಸ್ ಮನೆಯಲ್ಲಿ ಮೂರು ತಂಡಗಳನ್ನು ರಚಿಸಿ, ಕಾಯಿನ್ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ತಂಡಗಳು ನಕಲಿ ಕಾಯಿನ್‌ಗಳನ್ನು ಸಂಗ್ರಹಿಸಿ, ಜೋಪಾನವಾಗಿ ಇಟ್ಟುಕೊಳ್ಳಬೇಕಿತ್ತು. ಗೆದ್ದ ತಂಡದ ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುವ ಅವಕಾಶವಿತ್ತು. ಗಿಲ್ಲಿ ಮತ್ತು ಕಾವ್ಯಾ ಶೈವ ಒಂದೇ ತಂಡದಲ್ಲಿದ್ದರು.
ಗಿಲ್ಲಿ ತಮಗೆ ಸಿಕ್ಕ ಕಾಯಿನ್‌ಗಳನ್ನು ಬಟ್ಟೆಯ ಒಳಗೆ ಬಚ್ಚಿಟ್ಟಿದ್ದರು. ಆದರೆ, ಈ ಹಿಂದೆ ರಘು ಗೌಡ ದಾಳಿ ಮಾಡಿ ಕೆಲವು ಕಾಯಿನ್‌ಗಳನ್ನು ಕದ್ದಿದ್ದರೂ, ಗಿಲ್ಲಿ ಎಚ್ಚರಿಕೆ ವಹಿಸಲಿಲ್ಲ. ಮತ್ತೆ ರಘು ಪಕ್ಕದಲ್ಲಿ ಕುಳಿತು ಹಾಸ್ಯ ಮಾಡುತ್ತಾ, ತಾನು ಕಾಯಿನ್‌ಗಳನ್ನು ಎಲ್ಲಿ ಇಟ್ಟಿದ್ದೇನೆ ಎಂದು ಬಾಯಿಬಿಟ್ಟು ಹೇಳಿದರು. ಈ ಅವಕಾಶವನ್ನು ಬಳಸಿಕೊಂಡ ರಘು, ಗಿಲ್ಲಿಯಿಂದ ಕಾಯಿನ್‌ಗಳನ್ನು ಕದ್ದು, ಗಿಲ್ಲಿಯನ್ನು ಕೋಪಗೊಳಿಸಿದರು. ಗಿಲ್ಲಿ ಒಂದೇ ಸಮನೆ ಅರಚಾಡಿದರಾದರೂ ಫಲವಾಗಲಿಲ್ಲ.
ಕಾವ್ಯಾ ಶೈವರಿಂದ ಗಿಲ್ಲಿಗೆ ತರಾಟೆ
ಗಿಲ್ಲಿಯ ಈ ವರ್ತನೆಗೆ ಕಾವ್ಯಾ ಶೈವ ತೀವ್ರವಾಗಿ ಸಿಟ್ಟುಗೊಂಡರು. “ನೀನು ಹೋಗಿ ರಘುವನ್ನು ಟಾಂಟ್ ಮಾಡುತ್ತೀಯ, ರೇಗಿಸುತ್ತೀಯ. ಆದರೆ ಅವರು ರೇಗಿದಾಗ ತಿರುಗೇಟು ಕೊಡುತ್ತಾರೆ. ಇಂತಹ ವರ್ತನೆಯಿಂದ ಏನು ಪ್ರಯೋಜನ?” ಎಂದು ಕಾವ್ಯಾ ಗಿಲ್ಲಿಯನ್ನು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರವಿಲ್ಲದೆ ಗಿಲ್ಲಿ ಸುಮ್ಮನಾದರು. ಕಾವ್ಯಾ ಅವರ ಈ ತರಾಟೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
ಗಿಲ್ಲಿಯ ಹಾಸ್ಯದ ಓವರ್‌ಡೋಸ್ ಆಟದ ಗಂಭೀರತೆಯನ್ನು ಕಡಿಮೆ ಮಾಡಿದೆಯೇ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಗಿಲ್ಲಿಯ ರಂಜನಾತ್ಮಕ ವರ್ತನೆಯನ್ನು ಮೆಚ್ಚಿದರೆ, ಇನ್ನು ಕೆಲವರು ಆಟದ ಗಂಭೀರತೆಯನ್ನು ಕಾಪಾಡಿಕೊಳ್ಳದಿರುವುದಕ್ಕೆ ಟೀಕಿಸಿದ್ದಾರೆ.