ಬಿಗ್ ಬಾಸ್ ಸೀಸನ್ 12 ರಲ್ಲಿ ಈಗ ಟಾಸ್ಕ್‌ಗಳಿಗಿಂತ ವಾಗ್ವಾದಗಳೇ ಮೇಲುಗೈ ಸಾಧಿಸುತ್ತಿವೆ. ಗಿಲ್ಲಿ ನಟ (Gilli) ಹಾಗೂ ಅಶ್ವಿನಿ ಗೌಡ ನಡುವಿನ ಧಾರಾಳ ಕಾಳಗಕ್ಕೆ ಎಲ್ಲರೂ ದಂಗಾಗಿ ಹೋಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಂದು ಆಸಕ್ತಿಕರ ಟಾಸ್ಕ್ ಇದೆ. ಎರಡು ತಂಡಗಳು ಒಂದೊಂದು ದೊಡ್ಡ ಡ್ರಮ್ ಅನ್ನು ಹೆಗಲ ಮೇಲಿಟ್ಟುಕೊಂಡು ನಿಂತಿರಬೇಕು. ಎದುರಾಳಿ ತಂಡದವರು ಆ ಡ್ರಮ್‌ಗೆ ತಮ್ಮ ತೂಕ ಹಾಕಿ ಭಾರ ಹೆಚ್ಚಿಸುತ್ತಾ ಹೋಗಬೇಕು. ಡ್ರಮ್ ನೆಲಕ್ಕೆ ತಾಗುವವರೆಗೂ ಆ ತಂಡ ನಿಲ್ಲಬೇಕು. ಈ ಟಾಸ್ಕ್‌ನ ಉಸ್ತುವಾರಿ (ಸೂಪರ್‌ವೈಸರ್) ಆಗಿ ಗಿಲ್ಲಿ ಹಾಗೂ ಅಶ್ವಿನಿಗೆ ಜವಾಬ್ದಾರಿ ಬಂದಿತ್ತು.
ಆದರೆ ಆಟಗಾರರು ಆಡುವುದಕ್ಕಿಂತ ಮುಂಚೆಯೇ ಉಸ್ತುವಾರಿಗಳೇ ಒಬ್ಬರ ಮೇಲೊಬ್ಬರು ಕೂಗಾಡಿಕೊಂಡರು. ಮೊದಲು ಅಶ್ವಿನಿ ಗೌಡ ಗಿಲ್ಲಿಯನ್ನು ನೋಡಿ “ಸರಿಯಾಗಿ ಉಸ್ತುವಾರಿ ಮಾಡು” ಅಂತ ಗದರಿಸಿದರು. ಗಿಲ್ಲಿ ತಕ್ಷಣ ಪ್ರತಿಯಾಗಿ ಏಕವಚನದಲ್ಲೇ “ನೀನು ಕರೆಕ್ಟ್ ಆಗಿ ಉಸ್ತುವಾರಿ ಮಾಡೊಮ್ಮೋ” ಅಂತ ಗುಡುಗಿದರು. ಈ “ನೀನು” ಎಂಬ ಪದಕ್ಕೆ ಅಶ್ವಿನಿ ಅವರ ಪಿತ್ತ ನೆತ್ತಿಗೇರಿತ್ತು.
“ನೀನು ಯಾವನೋ ನನಗೆ ನೀನು-ತಾನು ಹೇಳೋಕೆ? ನಿನ್ನ ವ್ಯಕ್ತಿತ್ವ ಏನು ಅಂತ ಇಡೀ ಜಗಕ್ಕೆ ಗೊತ್ತಾಗುತ್ತೆ” ಅಂತ ಅಶ್ವಿನಿ ಗೌಡ ಗರಂ ಆಗಿ ಅಬ್ಬರಿಸಿದರು. ಗಿಲ್ಲಿ ತಣ್ಣಗೇ ಉತ್ತರ ಕೊಟ್ಟರು. “ವಟ ವಟ ಅಂತ ಬಿಪಿ ರೈಸ್ ಮಾಡ್ಕೋಬೇಡ ಮೇಡಂ” ಎಂದು ಗಿಲ್ಲಿ ಹೇಳಿದರು.
ಇವರಿಬ್ಬರ ನಡುವಿನ ಮಾತಿನ ಚಕಮಕಿ ಇದೇ ಮೊದಲಲ್ಲ. ನಿನ್ನೆಯ ಸಂಚಿಕೆಯಲ್ಲೂ ಇವರಿಬ್ಬರೂ ಜೋರಾಗಿ ಜಗಳವಾಡಿದ್ದರು. ಗಿಲ್ಲಿಗೆ “ಗುಲಾಮ” ಪಟ್ಟ ಬಂದಾಗ ಅಶ್ವಿನಿ, ಜಾಹ್ನವಿಯ ಜೊತೆ ಸೇರಿ ಗಿಲ್ಲಿಯನ್ನು ಟೇಬಲ್ ಒರೆಸಲು ಆದೇಶ ಮಾಡಿದ್ದರು. ಗಿಲ್ಲಿ ಕಾಲಮೇಲೆ ಕಾಲು ಹಾಕಿ ಕುಂತಿದ್ದು ಅಶ್ವಿನಿಗೆ ಸಿಟ್ಟು ತಂದಿತ್ತು. “ತೀರಾ ಓವರ್ ಆಗಿ ಆಡಬೇಡ, ನಿನ್ನ ಧಿಮಾಕು ನಿನ್ನ ಹತ್ತಿರವೇ ಇಟ್ಕೋ” ಅಂತ ಆಗಲೂ ಅಶ್ವಿನಿ ಗಿಲ್ಲಿಗೆ ಎಚ್ಚರಿಕೆ ಕೊಟ್ಟಿದ್ದರು.
ಇದೀಗ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರನ್ನೇ ಅತೀ ಹೆಚ್ಚು ನಿಯಮ ಉಲ್ಲಂಘನೆ ಮಾಡುವ ಸ್ಪರ್ಧಿಯೆಂದು ಬಹುತೇಕ ಸದಸ್ಯರು ಸೂಚಿಸಿದ್ದಾರೆ. ಬಿಗ್ ಬಾಸ್ ಅವರಿಗೆ ಶಿಕ್ಷೆಯಾಗಿ “ಮನೆಯ ಎಲ್ಲ ಸದಸ್ಯರ ಬಳಿ ಹೋಗಿ ನಿಯಮ ಮುರಿಯುವುದಿಲ್ಲ ಎಂದು ಹೇಳಿ” ಅಂತ ಆದೇಶಿಸಿದ್ದರು. ಅಶ್ವಿನಿ ಅದರಂತೆಯೇ ಮಾಡಿದ್ದರು.





