ನವದೆಹಲಿ (ನ.18): ದೇಶದಲ್ಲಿ ಹಳೆಯ ವಾಹನಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ರಸ್ತೆ ಸುರಕ್ಷತೆ ಹೆಚ್ಚಿಸಲು ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಹಾಕಿದೆ. ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ತಿದ್ದುಪಡಿ ಮಾಡಿ, ವಾಹನಗಳ ಫಿಟ್‌ನೆಸ್ ಪರೀಕ್ಷೆಯ (Fitness Test) ಶುಲ್ಕವನ್ನು ಪ್ರಸ್ತುತ ಮಟ್ಟಕ್ಕಿಂತ 10 ಪಟ್ಟು ಹೆಚ್ಚಿಸಲಾಗಿದೆ. ಈ ಹೊಸ ನಿಯಮಗಳು ದೇಶಾದ್ಯಂತ ತಕ್ಷಣದಿಂದ ಜಾರಿಗೆ ಬಂದಿವೆ.
ಇದುವರೆಗೆ 15 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಾಹನಗಳಿಗೆ ಒಂದೇ ರೀತಿಯ ಫ್ಲಾಟ್ ಶುಲ್ಕವಿತ್ತು. ಆದರೆ ಈಗ ಇದು ಸಂಪೂರ್ಣ ಬದಲಾಗಿದ್ದು, ವಾಹನಗಳ ವಯಸ್ಸು ಮತ್ತು ವರ್ಗಗಳನ್ನು ಸ್ಪಷ್ಟವಾಗಿ ವಿಭಜಿಸಿ ಹೊಸ ಶುಲ್ಕ ರಚನೆ ಪರಿಚಯಿಸಲಾಗಿದೆ.
ಹೊಸ ವಯೋಮಾನದ ಶ್ರೇಣಿಗಳು
ಸರ್ಕಾರದ ಹೊಸ ನಿಯಮಗಳು ವಾಹನಗಳನ್ನು ಮೂವರು ವಯಸ್ಸಿನ ವರ್ಗಗಳಿಗೆ ಹಂಚಿಕೆ ಮಾಡುತ್ತವೆ.
-
10 ರಿಂದ 15 ವರ್ಷ
-
15 ರಿಂದ 20 ವರ್ಷ
-
20 ವರ್ಷಕ್ಕಿಂತ ಹಳೆಯ ವಾಹನಗಳು
ವಾಹನದ ವಯಸ್ಸು ಹೆಚ್ಚಾದಂತೆ ಫಿಟ್‌ನೆಸ್ ಪರೀಕ್ಷಾ ಶುಲ್ಕವೂ ಹೆಚ್ಚಾಗಲಿದೆ. ಹೀಗಾಗಿ ತುಂಬಾ ಹಳೆಯ ವಾಹನವನ್ನು ರಸ್ತೆ ಮೇಲೆ ಇಡುವುದು ಇನ್ನಷ್ಟು ದುಬಾರಿಯಾಗಿದೆ.
ಹೊಸ ಶುಲ್ಕರಚನೆ ಹೇಗಿದೆ?
ಭಾರೀ ವಾಣಿಜ್ಯ ವಾಹನಗಳಿಗೆ ಭಾರಿ ಏರಿಕೆ
ಹೊಸ ನಿಯಮಗಳಿಂದ ಅತ್ಯಂತ ಹೆಚ್ಚಿನ ಪ್ರಭಾವ ಬಸ್ ಮತ್ತು ಟ್ರಕ್‌ಗಳಂತಹ ಭಾರೀ ವಾಣಿಜ್ಯ ವಾಹನಗಳ ಮೇಲೆ ಬೀಳಲಿದೆ. 20 ವರ್ಷಕ್ಕಿಂತ ಹಳೆಯ ಬಸ್/ಟ್ರಕ್‌ಗಳು ಈಗ ಪಾವತಿಸಬೇಕಾದ ಶುಲ್ಕ ₹25,000 (ಹಿಂದಿನ ಶುಲ್ಕ ₹2,500) ಆಗಿದೆ.
ಮಧ್ಯಮ ವಾಣಿಜ್ಯ ವಾಹನಗಳು
-
20 ವರ್ಷಕ್ಕಿಂತ ಹಳೆಯ ವಾಹನಗಳು: ಹೊಸ ಶುಲ್ಕ ₹20,000 (ಹಳೆಯ ದರ ₹1,800)
ಲಘು ಮೋಟಾರು ವಾಹನಗಳು (LMV)
-
20 ವರ್ಷಕ್ಕಿಂತ ಹೆಚ್ಚು ಹಳೆಯ LMV: ಫಿಟ್‌ನೆಸ್ ಪರೀಕ್ಷೆಗಾಗಿ ₹15,000
ತ್ರಿಚಕ್ರ ವಾಹನಗಳು
-
20 ವರ್ಷ ಮೇಲ್ಪಟ್ಟ ವಾಹನಗಳು: ಶುಲ್ಕ ₹7,000
ದ್ವಿಚಕ್ರ ವಾಹನಗಳಿಗೂ ಏರಿಕೆ
-
20 ವರ್ಷಕ್ಕಿಂತ ಹಳೆಯ 2-ವೀಲರ್‌ಗಳು: ಶುಲ್ಕ ₹600 → ₹2,000
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಾಹನಗಳಿಗೆ ಹೊಸ ದರ
ಪರಿಷ್ಕೃತ ನಿಯಮ 81 ಅಡಿಯಲ್ಲಿ:
-
ಮೋಟಾರ್ ಸೈಕಲ್: ₹400
-
LMV: ₹600
-
ಮಧ್ಯಮ/ಭಾರೀ ವಾಣಿಜ್ಯ ವಾಹನ: ₹1,000
ಸರ್ಕಾರದ ಉದ್ದೇಶ ಏನು?
ಕೇಂದ್ರ ಸರ್ಕಾರ ಈ ಕ್ರಮವನ್ನು “ರಸ್ತೆ ಸುರಕ್ಷತೆ” ಮತ್ತು “ಪರ್ಯಾವರಣ ಸಂರಕ್ಷಣೆ”ಗಾಗಿ ತಂದಿದೆ ಎನ್ನುತ್ತಿದೆ. ಹಳೇ ವಾಹನಗಳು ಹೆಚ್ಚು ಮಾಲಿನ್ಯ ಮಾಡುತ್ತವೆ ಮತ್ತು ಅಪಘಾತಕ್ಕೆ ಕಾರಣವಾಗುತ್ತವೆ. ಹೀಗಾಗಿ ಈ ಹೆಚ್ಚು ಶುಲ್ಕದಿಂದ ಹಳೇ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕಿ, ಮಾಲೀಕರನ್ನು ಸ್ಕ್ರ್ಯಾಪ್ ಮಾಡಲು ಅಥವಾ ಹೊಸ ವಾಹನ ಖರೀದಿಸಲು ಪ್ರೇರೇಪಿಸುವ ಉದ್ದೇಶ. ಇದು 2021ರ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮತ್ತೊಂದು ಹೆಜ್ಜೆ ಎಂದು ಸರ್ಕಾರ ತಿಳಿಸಿದೆ.
ಜನರ ಪ್ರತಿಕ್ರಿಯೆ
ಈ ನಿರ್ಧಾರದಿಂದ ಸಾಮಾನ್ಯ ಜನತೆ, ವಿಶೇಷವಾಗಿ ಮಧ್ಯಮ ವರ್ಗ ಮತ್ತು ಕೆಳಮಟ್ಟದ ವಾಹನ ಮಾಲೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಹಳೇ ವಾಹನ ಓಡಿಸೋದೇ ಅಪರಾಧವಾಯ್ತಾ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.





