ಏಪ್ರಿಲ್ 11: ಕ್ರಿಕೆಟ್ ಎಂದರೆ ಎದುರಾಳಿಗಳ ನಡುವಿನ ಸ್ಪರ್ಧೆ ಮಾತ್ರವಲ್ಲ, ಪ್ರತಿಭೆಗೆ ಸಂದ ಪ್ರಶಂಸೆಯೂ ಹೌದು. ಇದಕ್ಕೆ ಮತ್ತೊಂದು ಉದಾಹರಣೆ ನಿನ್ನೆ (ಏಪ್ರಿಲ್ 10) ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ IPL 2026ರ ಪಂದ್ಯದಲ್ಲಿ ಕಂಡುಬಂದಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೀನಾಯ ಸೋಲು ಉಂಟುಮಾಡಿದ ಯುವ ಸ್ಫೋಟಕ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ ಅವರಿಗೆ, RCB ದಿಗ್ಗಜ ವಿರಾಟ್ ಕೊಹ್ಲಿ ಸಹಿ ಹಾಕಿದ ಕ್ಯಾಪ್ ಅನ್ನು ಗಿಫ್ಟ್ ಆಗಿ ನೀಡಿ ಗೌರವಿಸಿದ್ದಾರೆ.
ಪಂದ್ಯದ ಹಿನ್ನೆಲೆ
ಮೊದಲು ಬ್ಯಾಟಿಂಗ್ ಮಾಡಿದ RCB 8 ವಿಕೆಟ್‌ಗೆ 201 ರನ್ ಕಲೆಹಾಕಿತ್ತು. ನಾಯಕ ರಜತ್ ಪಡಿದಾರ್ (52), ರೋಮಾರಿಯೊ ಶೆಫರ್ಡ್ (44*) ಮತ್ತು ವೆಂಕಟೇಶ್ ಐಯ್ಯರ್ (38) ಅವರ ಉತ್ತಮ ಪ್ರದರ್ಶನದಿಂದಾಗಿ RCB ಸವಾಲಿನ ಮೊತ್ತ ಕಟ್ಟಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ಕೇವಲ 18 ಓವರ್‌ಗಳಲ್ಲೇ 4 ವಿಕೆಟ್ ನಷ್ಟದೊಂದಿಗೆ 202 ರನ್ ಗಳಿಸಿ ಗೆಲುವು ಸಾಧಿಸಿತು.
A job well done with a long road ahead! 💗 pic.twitter.com/tymVTrdeqK
— Rajasthan Royals (@rajasthanroyals) April 11, 2026
ವೈಭವ್ ಸೂರ್ಯವಂಶಿ ಅಬ್ಬರ
ರಾಜಸ್ಥಾನ್ ಪರ ಆರಂಭಿಕನಾಗಿ ಇಳಿದ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಸ್ಫೋಟಕವಾಗಿತ್ತು. ಮೊದಲ ಓವರ್‌ನಲ್ಲೇ ಅನುಭವಿ ಭುವನೇಶ್ವರ್ ಕುಮಾರ್ ಅವರನ್ನು ಎರಡು ಬೌಂಡರಿಗಳಿಗೆ ಹೊಡೆದರು. ಎರಡನೇ ಓವರ್‌ನಲ್ಲಿ ಜೈಸ್ವಾಲ್ ವಿಕೆಟ್ ಕಳೆದುಕೊಂಡರೂ, ವೈಭವ್ ಮುನ್ನುಗ್ಗಿದರು. ಮೂರನೇ ಓವರ್‌ನಲ್ಲಿ ಹೇಜಲ್ವುಡ್ ಅವರಿಗೆ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ರೋಚಕತೆ ಮೂಡಿಸಿದರು. ಒಟ್ಟಾರೆಯಾಗಿ ಕೇವಲ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 78 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಅಮೋಘ ಇನ್ನಿಂಗ್ಸ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಅಲ್ಲದೆ, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಆರೆಂಜ್ ಕ್ಯಾಪ್ ಅನ್ನೂ ತಮ್ಮದಾಗಿಸಿಕೊಂಡರು.
ವಿರಾಟ್ ಕೊಹ್ಲಿ ಅವರ ಸ್ಪರ್ಧಾತ್ಮಕ ಮನೋಭಾವಕ್ಕೆ ಮೆಚ್ಚುಗೆ
ಪಂದ್ಯದ ಬಳಿಕ, ವೈಭವ್ ಅವರ ಕ್ಯಾಪ್ ಮೇಲೆ ವಿರಾಟ್ ಕೊಹ್ಲಿ ತಮ್ಮ ಸಹಿ ಸಹಿತ “Dear Vaibhav, Well Done” ಎಂದು ಬರೆದು ಕೊಟ್ಟಿದ್ದಾರೆ. ಈ ವಿಡಿಯೋ ಮತ್ತು ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಮ್ಮ ತಂಡಕ್ಕೆ ಸೋಲು ತಂದ ಎದುರಾಳಿ ಯುವ ಆಟಗಾರನ ಪ್ರತಿಭೆಯನ್ನು ಕೊಹ್ಲಿ ಅವರು ಗೌರವಿಸಿದ ರೀತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವೈಭವ್ ಸೂರ್ಯವಂಶಿ ಮಾತನಾಡುತ್ತಾ, “ವಿರಾಟ್ ಕೊಹ್ಲಿ ಅವರೇ ನನಗೆ ಕ್ಯಾಪ್ ಮೇಲೆ ಸಂದೇಶ ಬರೆದು ಕೊಟ್ಟಿದ್ದಾರೆ. ಅದು ನನಗೆ ತುಂಬಾ ಸ್ಪೆಷಲ್ ಆಗಿದೆ. ಅವರಂತಹ ದಿಗ್ಗಜರ ಮೆಚ್ಚುಗೆ ಗಳಿಸಿರುವುದು ನನ್ನ ಜೀವನದ ಮರೆಯಲಾಗದ ಕ್ಷಣ” ಎಂದರು.





