ತನ್ನ ‘ಟಟೀರಿ’ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಬಳಸಿದ್ದಕ್ಕಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಕ್ಷಮೆಯಾಚಿಸಿದ್ದಾರೆ ಪ್ರಸಿದ್ಧ ರ್ಯಾಪರ್ ಬಾದ್‌ಶಾ. ಕೇವಲ ಕ್ಷಮೆ ಕೇಳಿದ್ದಕ್ಕೆ ಸೀಮಿತವಾಗದೆ, 50 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಹರಿಯಾಣ್ವಿ ಹಾಡು ‘ಟಟೀರಿ’ಯಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಮತ್ತು ಅಶ್ಲೀಲ ಸಾಹಿತ್ಯ ಇದೆ ಎಂಬ ಆರೋಪ ಕೇಳಿಬಂದಿತ್ತು. ಹಾಡು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧಕ್ಕೆ ಒಳಗಾಗಿ, ಅಂತಿಮವಾಗಿ ಡಿಲೀಟ್ ಮಾಡಲಾಗಿತ್ತು. ಈ ವಿವಾದದ ನಡುವೆ ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಬಾದ್‌ಶಾ ಮತ್ತು ಹಾಡಿನ ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿತ್ತು.
ಮಹಿಳಾ ಆಯೋಗದಲ್ಲಿ ವಿಚಾರಣೆ : ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಬಾದ್‌ಶಾ, ನಿರ್ದೇಶಕ ಜೋಬನ್ ಸಂಧು, ಮಹಾವೀರ್ ಸಿಂಗ್ ಮತ್ತು ನಿರ್ಮಾಪಕ ಹಿತೇನ್ ಹಾಜರಿದ್ದರು. ಹಾಡಿನ ಸಾಹಿತ್ಯ ಮತ್ತು ಡ್ಯಾನ್ಸ್ ಮಹಿಳೆಯರ ಘನತೆಗೆ ಧಕ್ಕೆ ತಂದಿದೆ ಎಂದು ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿತು.
ಬಾದ್‌ಶಾ ಅವರು ತಮ್ಮ ತಪ್ಪಿನ ಅರಿವು ತಿಳಿಸಿ, ಮಹಿಳಾ ಆಯೋಗದ ಮುಂದೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಿದರು. “ಇನ್ನು ಮುಂದೆ ಇಂತಹ ಅಸಭ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ” ಎಂದು ಭರವಸೆ ನೀಡಿದರು.
ಸಕಾರಾತ್ಮಕ ಕ್ರಮಗಳ ಘೋಷಣೆ : ಕ್ಷಮೆ ಕೇಳಿದ್ದಕ್ಕೆ ಸೀಮಿತವಾಗದೆ ಬಾದ್‌ಶಾ ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡುವ ನಿರ್ಧಾರ ಕೈಗೊಂಡಿದ್ದಾರೆ.
- ಆರ್ಥಿಕವಾಗಿ ಹಿಂದುಳಿದ ವರ್ಗದ 50 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.
- ಮುಂದಿನ ನಾಲ್ಕು ತಿಂಗಳೊಳಗೆ ಮಹಿಳಾ ಸಬಲೀಕರಣದ ಬಗ್ಗೆ ಸಕಾರಾತ್ಮಕ ಹಾಡೊಂದನ್ನು ರಚಿಸಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
- ವಿವಾದಿತ ‘ಟಟೀರಿ’ ಹಾಡನ್ನು ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್ ಅವರು ಬಾದ್‌ಶಾ ಅವರ ನಿರ್ಧಾರವನ್ನು ಸ್ವಾಗತಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.





