ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು (ಏಪ್ರಿಲ್ 7) ಬೆಳ್ಳಂಬೆಳಗ್ಗೆ ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬಳ್ಳಾರಿ, ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (DA Case) ಆರೋಪದ ಮೇಲೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ಮನೆ ಮೇಲೆ ದಾಳಿ ನಡೆದಿದೆ. ಸುಶೀಲಮ್ಮ ಅವರು ಒಂದು ವರ್ಷದ ಹಿಂದೆಯೇ ಸ್ವಯಂ ನಿವೃತ್ತಿ (VRS) ಪಡೆದಿದ್ದರು. ಆದರೆ ಅವರು ಸೇವೆಯಲ್ಲಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಚಿತ್ರದುರ್ಗದ ಮೇದೇಹಳ್ಳಿ ಬಡಾವಣೆಯ ನಿವಾಸ ಮತ್ತು ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದ ತೋಟದ ಮನೆಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.
ಬಳ್ಳಾರಿಯಲ್ಲಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ ಅವರಿಗೆ ಲೋಕಾಯುಕ್ತ ಶಾಕ್ ನೀಡಿದೆ. ಸಿದ್ಧಾರ್ಥ್ ನಗರದಲ್ಲಿರುವ ಅವರ ನಿವಾಸ ಹಾಗೂ ಕಚೇರಿ ಸೇರಿದಂತೆ ನಾಲ್ಕು ಕಡೆ ದಾಳಿ ನಡೆದಿದೆ. ಅಧಿಕಾರಿಗಳು ಕೇವಲ ಮನೆ-ಕಚೇರಿಗೆ ಸೀಮಿತವಾಗದೆ, ಶಿವಣ್ಣ ಅವರು ಬಳಸುತ್ತಿದ್ದ ಸರ್ಕಾರಿ ‘ಬೊಲೆರೋ’ ವಾಹನವನ್ನೂ ಸಂಪೂರ್ಣವಾಗಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿದ್ದ ಕೆಲವು ಪ್ರಮುಖ ಕಡತಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಮೈಸೂರಿನಲ್ಲಿ ಲೋಕೋಪಯೋಗಿ ಇಲಾಖೆಯ (PWD) ಎಇಇ ರೇವಣ್ಣ ಅವರ ವಿರುದ್ಧ ಕಾರ್ಯಾಚರಣೆ ನಡೆದಿದೆ. ಮೈಸೂರಿನ ಕಚೇರಿ ಮತ್ತು ಮಂಡ್ಯದಲ್ಲಿರುವ ಅವರ ಎರಡು ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ. ಲೋಕಾಯುಕ್ತ ಎಸ್‌ಪಿ ಟಿ.ಜೆ. ಉದೇಶ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಆಸ್ತಿ ಪತ್ರಗಳು ಮತ್ತು ಬ್ಯಾಂಕ್ ಲಾಕರ್ ವಿವರಗಳನ್ನು ಕಲೆ ಹಾಕಲಾಗುತ್ತಿದೆ.
ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಕೆ.ಆರ್. ಅವರ ವಿರುದ್ಧ ಲೋಕಾಯುಕ್ತರು ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಶಿವಮೊಗ್ಗ ನಗರ, ಶಿಕಾರಿಪುರ ಮತ್ತು ಸಾಗರದಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಶಿಕಾರಿಪುರದ ತರಲಘಟ್ಟ ಬಳಿಯ 4 ಎಕರೆ ತೋಟ, ಫಾರ್ಮ್ ಹೌಸ್ ಮತ್ತು ಸಾಗರದ ಅಚಾಪುರ ಬಳಿಯ ಅವರ ಒಡೆತನದ ಶಾಲೆಯ ಮೇಲೂ ದಾಳಿ ಮಾಡಲಾಗಿದೆ. ಇದೇ ಇಲಾಖೆಯ ರಾಘವೇಂದ್ರ ಎಂಬುವವರ ಮನೆ ಮೇಲೂ ದಾಳಿ ನಡೆದಿದ್ದು, ದಾವಣಗೆರೆ ಲೋಕಾಯುಕ್ತ ಎಸ್ಪಿ ನೇತೃತ್ವದ 5 ತಂಡಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ಒಟ್ಟಾರೆಯಾಗಿ ರಾಜ್ಯದ ಹಲವೆಡೆ ಏಕಕಾಲಕ್ಕೆ ನಡೆದ ಈ ದಾಳಿಯು ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಸಂಜೆಯ ವೇಳೆಗೆ ವಶಪಡಿಸಿಕೊಳ್ಳಲಾದ ನಗದು, ಚಿನ್ನಾಭರಣ ಮತ್ತು ಆಸ್ತಿಗಳ ಸಂಪೂರ್ಣ ವಿವರ ಲಭ್ಯವಾಗಲಿದೆ.





