ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗೂ ನೀ ಕನ್ನಡವಾಗಿರು.. ಅನ್ನೋ ಮಾತನ್ನ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪಾಲಿಸ್ತಿರೋದು ಕಂಡು ಕನ್ನಡಿಗರು ಅಕ್ಷರಶಃ ಫಿದಾ ಆಗಿದ್ದಾರೆ. ಮದ್ವೆ ಆಗಿ ಹನಿಮೂನ್ ಅಂತ ದೇಶ ವಿದೇಶ ಸುತ್ತಾಡ್ತಿರೋ ರಶ್ಮಿಕಾ, ಸಡನ್ ಆಗಿ ಕನ್ನಡ ಹಾಗೂ ಕನ್ನಡದ ಸಿನಿಮಾ ಮೇಲೆ ಪ್ರೀತಿ ತೋರಿಸಿದ್ದಾರೆ.
ಕರ್ನಾಟಕದ ಹೆಣ್ಣು ಮಗಳು ರಶ್ಮಿಕಾ ಮಂದಣ್ಣ, ಸದ್ಯ ತೆಲಂಗಾಣದ ಸೊಸೆಯಾಗಿದ್ದಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಕೈ ಹಿಡಿಯೋ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಹಂತ ಹಂತವಾಗಿ ಬೆಳೆದು, ಸದ್ಯ ಬಾಲಿವುಡ್ ಅಂಗಳದ ಮೋಸ್ಟ್ ಡಿಮ್ಯಾಂಡಿಂಗ್ ನಟಿಮಣಿಯಾಗಿ ಮಿಂಚ್ತಿರೋ ರಶ್ಮಿಕಾ ಬೆಳವಣಿಗೆಯನ್ನ ನೋಡಿ ಖುಷಿ ಪಡೋರಿಗಿಂತ, ಆಕೆಯ ಕಾಲೆಳೆಯುವವರೇ ಜಾಸ್ತಿ. ಇಂದಿಗೂ ಆಕೆಗೆ ಒಳ್ಳೆಯದಾಗಬಾರದು ಅಂತ ಶಪಿಸುವವರೇ ಜಾಸ್ತಿ ಇದ್ದಾರೆ. ಅದಕ್ಕೆ ಕಾರಣ ಹತ್ತು ಹಲವು.
ಸರಿದ ಕಾರ್ಮೋಡ.. OMG..! ಕನ್ನಡ ಮೇಲೆ ರಶ್ಮಿಕಾಗೆ ಲವ್
ಮೋಡ ಕವಿದ ವಾತಾವರಣ ಗೀತೆ ಮೆಚ್ಚಿದ ನ್ಯಾಷನಲ್ ಕ್ರಶ್
ಸಾಲು ಸಾಲು ವಿವಾದಗಳಿಂದ ಒಂದಷ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರೋ ರಶ್ಮಿಕಾ, ಪರಭಾಷಾ ನಟಿಮಣಿ ಅಂತಲೇ ಬಿಂಬಿಸಿಕೊಂಡಿದ್ದಾರೆ. ಆದ್ರೆ ಆಕೆಯ ಸಕ್ಸಸ್ ಹಿಂದೆ ಸಾಕಷ್ಟು ಶ್ರಮವಿದೆ. ಮಿಗಿಲಾಗಿ ಪ್ರತಿಭೆ ಇದೆ. ಹಾಗಾಗಿಯೇ ಆ ಪ್ರತಿಭೆ ಹಾಗೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ದಿನೇ ದಿನೇ ಮುಗಿಲೆತ್ತರಕ್ಕೆ ಬೆಳೆಯುತ್ತಾ ಹೋಗ್ತಿದ್ದಾರೆ. ಹಾಗಂತ ಆಕೆ ಬದಲಾಗಿಲ್ಲ. ಯಾಕಂದ್ರೆ ತಾನು ಕನ್ನಡತಿ, ಕನ್ನಡ ನೆಲದ ಹೆಣ್ಣು ಅನ್ನೋದನ್ನ ಮರೆತೇ ಇಲ್ಲ. ಅದಕ್ಕೆ ಮೋಡ ಕವಿದ ವಾತಾವರಣ ಚಿತ್ರದ ಹಾಡು ಸಾಕ್ಷಿ ಆಗಿದೆ.
ಶೀಲಮ್ ಎಂ ಸ್ವಾಮಿ ಹಾಗೂ ಸಾತ್ವಿಕಾ ನಟನೆಯ ಮೋಡ ಕವಿದ ವಾತಾವರಣ ಚಿತ್ರದ ಯಯಾತಿ ಸಾಂಗ್ ಬಿಡುಗಡೆ ಆಗಿದೆ. ಸಿಂಪಲ್ ಸುನಿ ನಿರ್ದೇಶಿಸಿರೋ ಈ ಸಿನಿಮಾದ ಹಾಡಿಗೆ ಅವರೇ ಸಾಹಿತ್ಯ ಕೂಡ ರಚಿಸಿದ್ದಾರೆ. ಅಪ್ಪಟ ಕನ್ನಡ ಹಾಡು ಇದಾಗಿದ್ದು, ನೋಡುಗರ ಕಣ್ಮನ ತಣಿಸುವಂತಿದೆ. ಹೀಗಾಗಿ ಈ ಹಾಡಿಗೆ ಶುಭ ಕೋರಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ರಶ್ಮಿಕಾ ಮಂದಣ್ಣ. ಇಡೀ ತಂಡಕ್ಕೆ ಶುಭವಾಗಲಿ. ಜಾಸ್ತಿ ಒಳಿತಾಗಲಿ ಸುನಿ ಸರ್. ಮತ್ತಷ್ಟು ಪ್ರೀತಿ ಅಂತ ಪೋಸ್ಟ್ ಹಾಕಿದ್ದಾರೆ ರಶಿ. ಇದು ಚಿತ್ರತಂಡದ ಖುಷಿಯನ್ನ ಇಮ್ಮಡಿಗೊಳಿಸಿದೆ.
ಸಿಂಪಲ್ ಸುನಿ ಬಾಂಧವ್ಯ ಮರೆಯದ ಚಮಕ್ ಚೆಲುವೆ ರಶಿ..!
ಸಕ್ಸಸ್‌ನ ಉತ್ತುಂಗದಲ್ಲಿದ್ರೂ ಅವಕಾಶ ಕೊಟ್ಟವ್ರಿಗಾಗಿ ಪೋಸ್ಟ್
ಅಂದಹಾಗೆ ರಶ್ಮಿಕಾ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಕಿರಿಕ್ ಪಾರ್ಟಿ ಆದ ಬಳಿಕ ಬಂದಿದ್ದೇ ಅಪ್ಪು ಜೊತೆಗಿನ ಅಂಜನೀಪುತ್ರ ಹಾಗೂ ಸಿಂಪಲ್ ಸುನಿ ನಿರ್ದೇಶನದ ಗಣೇಶ್ ನಟನೆಯ ಚಮಕ್ ಸಿನಿಮಾಗಳು. ಆಗ ಆಕೆಗೆ ಚಮಕ್ ಚಿತ್ರದಲ್ಲಿ ಅವಕಾಶ ನೀಡಿ, ದೊಡ್ಡ ಹಿಟ್ ಕೂಡ ನೀಡಿದ್ರು ಸುನಿ. ಹಾಗಾಗಿಯೇ ಆ ಬಾಂಧವ್ಯವನ್ನ ಇಂದಿಗೂ ಉಳಿಸಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ. ತಾನು ಎಲ್ಲಿಂದ ಬಂದೆ ಅನ್ನೋ ರೂಟ್ಸ್‌ನ ಮರೆಯದ ರಶ್ಮಿಕಾ ಮೇಲೆ ಕನ್ನಡಿಗರಿಗೆ ಗೌರವ ಹಾಗೂ ಅಭಿಮಾನ ಹೆಚ್ಚುವಂತಾಗಿದೆ.
ಅಂದಹಾಗೆ ರಶ್ಮಿಕಾ ಇಂದು ಕನ್ನಡದ ಸಿನಿಮಾಗಳನ್ನ ಮಾಡದೇ ಇರಬಹುದು. ಆದ್ರೆ ಆಕೆ ಪುನೀತ್ ರಾಜ್‌ಕುಮಾರ್, ಗಣೇಶ್, ದರ್ಶನ್, ಧ್ರುವ ಸರ್ಜಾ ಸಿನಿಮಾಗಳು ಹಾಗೂ ಅದರ ಹಾಡುಗಳು ಪದೇ ಪದೇ ಕೇಳುವಂತಿವೆ, ನೋಡುವಂತಿವೆ. ಸೋ.. ರಶ್ಮಿಕಾ ಕನ್ನಡತಿ ಅನ್ನೋದನ್ನ ಈ ಪ್ರಕರಣದಿಂದ ಮತ್ತೆ ಪ್ರೂವ್ ಆಗಿದೆ. ಆದಷ್ಟು ಬೇಗ ಆಕೆ ಕನ್ನಡದಲ್ಲೂ ಸಿನಿಮಾ ಮಾಡಲಿ ಅನ್ನೋದು ಕನ್ನಡಿಗರ ಆಶಯ.





