ಬೆಂಗಳೂರು, ಏಪ್ರಿಲ್ 4: ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಆಟೋ ಗ್ಯಾಸ್ (ಎಲ್‌ಪಿಜಿ) ತೀವ್ರ ಅಭಾವ ಉಂಟಾಗಿದೆ. ಗ್ಯಾಸ್ ಬಂಕ್‌ನವರು ದುಬಾರಿ ದರ ವಸೂಲಿ ಮಾಡುತ್ತಿರುವುದರಿಂದ ಬೆಂಗಳೂರಿನ ಕೆಲ ಆಟೋ ಚಾಲಕರು ಪ್ರಯಾಣಿಕರಿಂದ ಶೇಕಡಾ 10 ರಷ್ಟು ಹೆಚ್ಚುವರಿ ಬಾಡಿಗೆ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಶುಕ್ರವಾರ ನಗರದ ಹಲವು ಕಡೆಗಳಲ್ಲಿ ‘ಬೆಂಗಳೂರು ಆಟೋ ಸೇನೆ’ ಹೆಸರಿನಲ್ಲಿ ಮೀಟರ್ ಬಳಿ ಬೋರ್ಡ್‌ಗಳನ್ನು ಹಾಕಲಾಗಿತ್ತು.
ಗ್ಯಾಸ್‌ಗಾಗಿ ಚಾಲಕರ ಪರದಾಟ
ಲಗ್ಗೆರೆ ಬಳಿಯ ಎಲ್‌ಪಿಜಿ ಬಂಕ್‌ನಲ್ಲಿ ಗುರುವಾರ ಸಂಜೆಯಿಂದಲೂ 800ಕ್ಕೂ ಅಧಿಕ ಆಟೋಗಳು ಸರದಿಯಲ್ಲಿ ನಿಂತಿದ್ದವು. ಶುಕ್ರವಾರ ಮಧ್ಯಾಹ್ನದವರೆಗೂ ಚಾಲಕರು ಗ್ಯಾಸ್‌ಗಾಗಿ ಕಾಯುತ್ತಿದ್ದರು. ಅದೇ ರೀತಿ ಬಿಳೇಕಳ್ಳಿಯ ವಿಜಯಾ ಬ್ಯಾಂಕ್ ಲೇಔಟ್ ಮತ್ತು ನಂದಿನಿ ಲೇಔಟ್‌ನಲ್ಲೂ ಆಟೋಗಳ ಬೃಹತ್ ಸಾಲು ಕಂಡುಬಂತು. ‘ಹೆಂಡತಿ-ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬೆಳಗ್ಗೆ 4 ಗಂಟೆಗೇ ಆಗಮಿಸಿ ಗ್ಯಾಸ್‌ಗಾಗಿ ಕಾಯುತ್ತಿದ್ದೇವೆ’ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರ ಹೇಳಿಕೆಗೆ ಆಕ್ರೋಶ
ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ‘ಆಟೋ ಎಲ್‌ಪಿಜಿಗೆ ಅಭಾವವಿಲ್ಲ’ ಎಂದು ಹೇಳಿಕೆ ನೀಡಿರುವುದಕ್ಕೆ ಆಟೋ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧವೇ ವಿಡಿಯೋ ಮಾಡಿ, ಗ್ಯಾಸ್ ಕೊರತೆಯ ನೈಜತೆಯನ್ನು ತೋರಿಸಿಕೊಟ್ಟಿದ್ದಾರೆ. ‘ಸಚಿವರು ಒಮ್ಮೆ ಇಲ್ಲಿಗೆ ಬಂದು ನೋಡಲಿ, ನಮ್ಮ ಪಾಡು ಅವರಿಗೆ ಅರ್ಥವಾಗುತ್ತದೆ’ ಎಂದು ಚಾಲಕರು ಹೇಳಿದ್ದಾರೆ.
ಲೀಟರ್‌ಗೆ 135 ರೂ. ದರ ವಸೂಲಿ
ಕೆಲ ಗ್ಯಾಸ್ ಏಜೆನ್ಸಿಗಳು ಅಭಾವವನ್ನೇ ಬಂಡವಾಳ ಮಾಡಿಕೊಂಡು ಮನಸ್ಸಿಗೆ ಬಂದಂತೆ ದರ ವಸೂಲಿ ಮಾಡುತ್ತಿವೆ. ವರ್ತೂರು ಕೋಡಿ ಬಳಿಯ ಎಲ್‌ಪಿಜಿ ಬಂಕ್‌ವೊಂದರಲ್ಲಿ ಲೀಟರ್‌ಗೆ 135 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಚಾಲಕರು ಪ್ರಶ್ನಿಸಿದಾಗ, ‘ಬೇಕಾದರೆ ಹಾಕಿಸಿಕೊಳ್ಳಿ, ಇಲ್ಲದಿದ್ದರೆ ನಡಿಯಿರಿ’ ಎಂದು ನಿರ್ಲಕ್ಷ್ಯ ತೋರಿಸಲಾಗಿದೆ.
ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ 2 ಕಿಮೀ ಸರದಿ
ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಆಟೋ ಗ್ಯಾಸ್ ಸ್ಟೇಷನ್ ಬಳಿ ಗುರುವಾರ ರಾತ್ರಿಯಿಂದಲೇ ಸುಮಾರು ಎರಡು ಕಿಲೋಮೀಟರ್ ಉದ್ದದ ಸರದಿ ಸಾಲು ನಿಂತಿತ್ತು. ಆಟೋಗಳಿಗೆ 200 ರೂ. ಮತ್ತು ಕಾರುಗಳಿಗೆ 500 ರೂ. ಮೌಲ್ಯದ ಗ್ಯಾಸ್ ಮಾತ್ರ ತುಂಬಿಸಲು ಅವಕಾಶ ನೀಡಲಾಗಿತ್ತು. ಗ್ಯಾಸ್ ಗಾಗಿ ಮುಗಿಬಿದ್ದ ಚಾಲಕರನ್ನು ನಿಯಂತ್ರಿಸಲು ಏಜೆನ್ಸಿ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
‘ಹೋಟೆಲಿಗೆ ಅನುಮತಿ, ನಮಗಿಲ್ಲ’
ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಾದಾಗ ಹೋಟೆಲ್‌ನವರು ತಿನಿಸುಗಳ ದರ ಏರಿಸುತ್ತಾರೆ. ಆದರೆ ನಾವು ಹೆಚ್ಚುವರಿ ಬಾಡಿಗೆ ಕೇಳಿದರೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡುತ್ತಾರೆ. ಹೀಗಾದರೆ ನಮ್ಮ ಜೀವನ ನಿರ್ವಹಣೆ ಹೇಗೆ? ಎಂದು ಚಾಲಕರು ವ್ಯಥೆ ವ್ಯಕ್ತಪಡಿಸಿದ್ದಾರೆ.ಈ ಪರಿಸ್ಥಿತಿಯಲ್ಲಿ 10% ಹೆಚ್ಚುವರಿ ಬಾಡಿಗೆ ಕೇಳುವುದು ಅನಿವಾರ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.





