ಜಾರ್ಖಂಡ್, ಏಪ್ರಿಲ್ 1: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ನೀಡಲಾದ ಆಹಾರ ಸೇವಿಸಿದ ಮಹಿಳಾ ಪ್ರಯಾಣಿಕರೊಬ್ಬರು ತಮಗೆ ತೀವ್ರ ಅಲರ್ಜಿ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ರಾಂಚಿ ಮೂಲದ ಆಯುಷಿ ಸಿಂಗ್ ಎಂಬುವವರು ಮಾರ್ಚ್ 27 ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನೀಡಲಾದ ಊಟವನ್ನು ಸೇವಿಸಿದ ನಂತರ ತಮ್ಮ ತುಟಿ ವಿಪರೀತವಾಗಿ ಊದಿಕೊಂಡಿದ್ದು, ಮುಖದ ಮೇಲೆ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಅವರ ಎರಡು ವರ್ಷದ ಮಗು ಕೂಡ ಅದೇ ಆಹಾರ ಸೇವಿಸಿ ಭೇದಿಯಿಂದ ಬಳಲಿದ್ದಾಗಿ ಅವರು ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದಾರೆ. ರೈಲಿನಲ್ಲಿ ನೀಡಲಾದ ನೀರಿನ ರುಚಿಯೂ ವಿಭಿನ್ನವಾಗಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ತುಟಿ ಊದಿಕೊಂಡ ಫೋಟೋವನ್ನು ಸಹ ಅವರು ಪೋಸ್ಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ರೈಲಿನಲ್ಲೇ ನನಗೆ ತೀವ್ರ ಅಲರ್ಜಿ ಕಾಣಿಸಿಕೊಂಡಿತು. ನಾನು ತಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕಾಯಿತು. ಇದು ಸಂಪೂರ್ಣವಾಗಿ ನಿರ್ಲಕ್ಷ್ಯದಿಂದಾಗಿದೆ” ಎಂದು ಆಯುಷಿ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಅವರು ತಮ್ಮ ವೈದ್ಯಕೀಯ ವರದಿಗಳನ್ನು ಸಹ ಲಗತ್ತಿಸಿದ್ದು, ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಐಆರ್ಸಿಟಿಸಿ ಸಮಜಾಯಿಷಿ:
ಈ ಘಟನೆಗೆ ಸಂಬಂಧಿಸಿದಂತೆ ಐಆರ್ಸಿಟಿಸಿ (IRCTC) ತಕ್ಷಣವೇ ಪ್ರತಿಕ್ರಿಯಿಸಿದೆ. ಅಂದು ನೀಡಲಾದ ಆಹಾರದ ಗುಣಮಟ್ಟವನ್ನು ತಪಾಸಣೆ ಮಾಡಲಾಗಿದ್ದು, ಅದು ತೃಪ್ತಿಕರವಾಗಿತ್ತು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಅಲ್ಲದೆ, ಅದೇ ದಿನ ಪ್ರಯಾಣಿಸಿದ ಇತರ ಯಾವುದೇ ಪ್ರಯಾಣಿಕರಿಂದ ಇಂತಹ ದೂರುಗಳು ಬಂದಿಲ್ಲ ಎಂದು ಐಆರ್ಸಿಟಿಸಿ ಮೂಲಗಳು ತಿಳಿಸಿವೆ.
“ಎಲ್ಲಾ ವಂದೇ ಭಾರತ್ ರೈಲುಗಳಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಪ್ರತಿ ದಿನದ ಊಟದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತದೆ. ನಮ್ಮ ದಾಖಲೆಗಳ ಪ್ರಕಾರ ಮಾರ್ಚ್ 27 ರಂದು ನೀಡಲಾದ ಆಹಾರದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
@RailwaySeva @drmljn Kindly look into the matter urgently. I was travelling in Vande Bharat 22500 E1 coach on 27.3.26 and after consuming lunch, I developed a severe allergy which could have been life threatening. My Son (2 yrs) too developed diarrhoea. (Photo attached for ref) pic.twitter.com/KBdyppDq4m
— The_Mediocre_Fille (@AyushiS54377868) March 30, 2026
ಆಯುಷಿ ಸಿಂಗ್ ಅವರ ಪೋಸ್ಟ್ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಬಗೆಯ ಚರ್ಚೆಗಳು ನಡೆಯುತ್ತಿವೆ. ಕೆಲವರು ಪ್ರಯಾಣಿಕೆಯ ಬೆಂಬಲಕ್ಕೆ ನಿಂತು, ರೈಲ್ವೆ ಆಹಾರದ ಗುಣಮಟ್ಟದ ಬಗ್ಗೆ ಸಾಕಷ್ಟು ಲೋಪಗಳಿವೆ ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವರು, ಅಲರ್ಜಿಯು ವ್ಯಕ್ತಿಯ ದೈಹಿಕ ಸ್ಥಿತಿಯನ್ನೂ ಅವಲಂಬಿಸಿರುತ್ತದೆ ಮತ್ತು ಅದನ್ನು ನೇರವಾಗಿ ರೈಲ್ವೆ ಆಹಾರದ ಮೇಲೆ ಆರೋಪಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಂದೇ ಭಾರತ್ ರೈಲುಗಳು ತಮ್ಮ ಆಧುನಿಕ ಸೌಲಭ್ಯಗಳು ಮತ್ತು ವೇಗಕ್ಕೆ ಹೆಸರುವಾಸಿಯಾಗಿವೆ. ಆದರೆ, ಆಹಾರದ ಗುಣಮಟ್ಟದ ವಿಚಾರದಲ್ಲಿ ಸಾಕಷ್ಟು ಬಾರಿ ಪ್ರಯಾಣಿಕರಿಂದ ದೂರುಗಳು ಕೇಳಿಬರುತ್ತವೆ. ಈ ಹಿಂದೆಯೂ ವಂದೇ ಭಾರತ್ ಸೇರಿದಂತೆ ಇತರ ರೈಲುಗಳಲ್ಲಿ ಆಹಾರದಲ್ಲಿ ಕೀಟ, ವಿದೇಶಿ ವಸ್ತುಗಳು ಪತ್ತೆಯಾದ ಪ್ರಕರಣಗಳು ವರದಿಯಾಗಿವೆ.
ಈ ಪ್ರಕರಣದ ಕುರಿತು ರೈಲ್ವೆ ಇಲಾಖೆಯ ಮೇಲ್ವಿಚಾರಣಾ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆಯುಷಿ ಅವರು ತಮ್ಮ ಆರೋಪವನ್ನು ಸಮರ್ಥಿಸಿಕೊಂಡು ಹೆಚ್ಚಿನ ದಾಖಲೆಗಳನ್ನು ಸಲ್ಲಿಸಿದರೆ, ಇಲಾಖೆ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.





