ನವದೆಹಲಿ, ಮಾರ್ಚ್ 27: ದೇಶದ ಜನತೆಗೆ ದೊಡ್ಡ ನಿರಾಳ ನೀಡುವ ನಿರ್ಧಾರವೊಂದನ್ನು ಕೇಂದ್ರ ಸರ್ಕಾರ ಶುಕ್ರವಾರ ಕೈಗೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಜಾಗತಿಕವಾಗಿ ಇಂಧನ ಬೆಲೆಗಳಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ಇಂಧನ ದರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಅಬಕಾರಿ ಸುಂಕದಲ್ಲಿ ಎಷ್ಟು ಕಡಿತ?
ಕೇಂದ್ರ ಸರ್ಕಾರದ ಹೊಸ ಆದೇಶದಂತೆ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ ₹13 ರಿಂದ ₹3ಕ್ಕೆ ಇಳಿಸಲಾಗಿದೆ. ಅಂದರೆ ಪೆಟ್ರೋಲ್ ಮೇಲಿನ ಸುಂಕದಲ್ಲಿ ₹10 ಕಡಿತವಾಗಿದೆ. ಅದೇ ರೀತಿ, ಡೀಸೆಲ್ ಮೇಲೆ ವಿಧಿಸಲಾಗುತ್ತಿದ್ದ ಲೀಟರ್ಗೆ ₹10ರ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಡೀಸೆಲ್ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ.
ಈ ಕ್ರಮದಿಂದಾಗಿ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಗಣನೀಯ ಕಡಿತ ಕಂಡುಬರುವ ಸಾಧ್ಯತೆ ಇದೆ. ತೈಲ ಮಾರುಕಟ್ಟೆ ಕಂಪನಿಗಳು ಈ ಸುಂಕ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ತಲುಪಿಸುವ ನಿರೀಕ್ಷೆಯಿದೆ.
ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆ ಏನು?
ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ತೀವ್ರ ಬಿಕ್ಕಟ್ಟು ಈ ಸುಂಕ ಕಡಿತಕ್ಕೆ ಪ್ರಮುಖ ಕಾರಣವಾಗಿದೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನ ಉಂಟಾಗಿದೆ. ವಿಶ್ವದ ಕಚ್ಚಾ ತೈಲ ಮತ್ತು ಅನಿಲ ಪೂರೈಕೆಯ ಸುಮಾರು ಐದನೇ ಒಂದು ಭಾಗ. ದಿನಕ್ಕೆ 20 ರಿಂದ 25 ಮಿಲಿಯನ್ ಬ್ಯಾರೆಲ್‌ಗಳವರೆಗೆ ಈ ಜಲಸಂಧಿಯ ಮೂಲಕವೇ ಸಾಗಾಟವಾಗುತ್ತದೆ.
ಈಗ ಜಲಸಂಧಿಯಲ್ಲಿ ಸೃಷ್ಟಿಯಾಗಿರುವ ಸಂಕಷ್ಟದಿಂದಾಗಿ ಕಚ್ಚಾ ತೈಲದ ಜಾಗತಿಕ ಬೆಲೆಗಳು ತೀವ್ರ ಏರಿಕೆಯಾಗಿವೆ. ಈ ಬೆಲೆ ಏರಿಕೆಯಿಂದ ದೇಶೀಯ ಇಂಧನ ದರಗಳ ಮೇಲೆ ಬೀರಬಹುದಾದ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಅಬಕಾರಿ ಸುಂಕ ಕಡಿತದ ನೇರ ಪ್ರಯೋಜನ ಸಾಮಾನ್ಯ ಜನತೆಗೆ ದೊರಕಲಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿಮೆಯಾದರೆ, ಸಾರಿಗೆ ವೆಚ್ಚದಲ್ಲಿ ಇಳಿಕೆಯಾಗಲಿದೆ. ಇದರಿಂದ ಸರಕು ಸಾಗಾಣಿಕೆ ವೆಚ್ಚ ಕಡಿಮೆಯಾಗಿ, ದಿನಸಿ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳಲ್ಲೂ ಸ್ಥಿರತೆ ಉಂಟಾಗುವ ಸಾಧ್ಯತೆ ಇದೆ. ಜೊತೆಗೆ, ಸ್ವಂತ ವಾಹನ ಹೊಂದಿರುವವರಿಗೆ ಇಂಧನ ಖರ್ಚಿನಲ್ಲಿ ಗಣನೀಯ ಉಳಿತಾಯವಾಗಲಿದೆ.




