ವರದಿ: ಹೇಮಂತ್ ಕುಮಾರ್ ಎಸ್. ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್, ಗ್ಯಾರಂಟಿ ನ್ಯೂಸ್
ಬೆಂಗಳೂರು: ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ಪಡೆಗೆ ‘ಕಿವಿ ಹಿಂಡಿದ’ ಬೆನ್ನಲ್ಲೇ ಇದೀಗ ಐಪಿಎಲ್ ಕ್ರಿಕೆಟ್ ಜ್ವರ ಶುರುವಾಗಿದೆ. ಮಾರ್ಚ್ 28ರಿಂದ ಬೆಂಗಳೂರಿನಲ್ಲಿ ಐಪಿಎಲ್‌ನ ಅದ್ಧೂರಿ ಉದ್ಘಾಟನೆ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.
ಬೆಂಗಳೂರಿಗೆ ಹೈದರಾಬಾದ್ ಸವಾಲು
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಸವಾಲೆಸೆಯಲಿದೆ. ಬೆಂಗಳೂರಿನ ತವರು ನೆಲದಲ್ಲೇ ಮೊದಲ ಪಂದ್ಯ ಆಯೋಜನೆಯಾಗಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ನೀಡಿದೆ.
ಹೊಸ ಲುಕ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ
ಕಳೆದ ವರ್ಷ ಕಾಲ್ತುಳಿತದಂತಹ ಅಹಿತಕರ ಘಟನೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೊಸ ಲುಕ್ ನೀಡಲಾಗಿದೆ. ಈ ಬಾರಿ ಅಭಿಮಾನಿಗಳನ್ನು ಸ್ವಾಗತಿಸಲು ಸ್ಟೇಡಿಯಂ ಸಜ್ಜಾಗಿದ್ದು, ಆಸನ ವ್ಯವಸ್ಥೆ, ಟಿಕೆಟ್ ಕೌಂಟರ್ ಸೇರಿದಂತೆ ಕ್ರೀಡಾಂಗಣವನ್ನು ಅಚ್ಚುಕಟ್ಟಾಗಿ ರೆಡಿ ಮಾಡಲಾಗಿದೆ. ನವೀಕೃತಗೊಂಡ ಕ್ರೀಡಾಂಗಣವು ಹಿಂದೆಂದಿಗಿಂತಲೂ ಸುಂದರವಾಗಿ ಕಾಣುತ್ತಿದ್ದು, ಐಪಿಎಲ್ ಪಂದ್ಯಗಳಿಗೆ ಸಾಕ್ಷಿಯಾಗಲು ಕಾಯುತ್ತಿದೆ.
ಆರ್ಸಿಬಿ ಪಡೆಯಲ್ಲಿ ದಿಗ್ಗಜರ ದಂಡು
ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠ ಆಟಗಾರರನ್ನು ಹೊಂದಿದೆ. ಈ ಬಾರಿಯೂ ಕೂಡ ಹಳೆಯ ಟೀಂ ಮುಂದುವರೆಯಲಿದ್ದು, ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಹಾಗೂ ಜೋಶ್ ಹ್ಯಾಜಲ್ವುಡ್ ಅವರಂತಹ ಘಟಾನುಘಟಿಗಳು ತಂಡದಲ್ಲಿದ್ದು, ಎದುರಾಳಿಗಳಿಗೆ ನಡುಕ ಹುಟ್ಟಿಸಲು ಸಜ್ಜಾಗಿದ್ದಾರೆ. ಇನ್ನೂ ಬೌಲಿಂಗ್‌ನಲ್ಲಿ ಜೋಷ್ ಹ್ಯಾಜಲ್ವುಡ್, ಯಶ್ ದಯಾಳ್, ಜೆಕಾಬ್ ಡೆಫ್ಪಿ, ಸುಯಾಶ್ ಶರ್ಮಾ ಸೇರಿದಂತೆ ಆನೇಕ ತಾರಾಬಳಗವನ್ನ ಹೊಂದಿದೆ.
ಸನ್ರೈಸರ್ಸ್ ಹೈದರಾಬಾದ್ ಅಬ್ಬರ
ಮತ್ತೊಂದೆಡೆ ಪ್ಯಾಟ್ ಕಮಿನ್ಸ್ ಸಾರಥ್ಯದ ಹೈದರಾಬಾದ್ ತಂಡವೂ ಕಡಿಮೆ ಇಲ್ಲ. ಟ್ರಾವಿಸ್ ಹೆಡ್, ಹೆನ್ರಿಕ್ ಕ್ಲಾಸೆನ್, ಇಶಾನ್ ಕಿಶನ್ ಹಾಗೂ ಹರ್ಷಲ್ ಪಟೇಲ್ ಅವರಂತಹ ಪ್ರಮುಖ ಆಟಗಾರರು ತಂಡದ ಶಕ್ತಿಯಾಗಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲೇ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ.
ಕಳೆದ ಬಾರಿಯ ಚಾಂಪಿಯನ್ಸ್ ಆಗಿರುವ ಆರ್‌ಸಿಬಿ ಮೇಲೆ ಅಭಿಮಾನಿಗಳು ಈ ಬಾರಿಯೂ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಈ ಸಲವೂ ಕಪ್ ನಮ್ಮದೇ’ ಎಂಬ ಆಸೆಯೊಂದಿಗೆ ಆರ್‌ಸಿಬಿ ಮತ್ತೆ ಚಾಂಪಿಯನ್ ಆಗಿ ಹೊರಹೊಮ್ಮಲಿ ಎನ್ನುವುದೇ ಪ್ರತಿಯೊಬ್ಬ ಅಭಿಮಾನಿಯ ಹಾರೈಕೆಯಾಗಿದೆ.
ಅಭ್ಯಾಸ ಶುರುಮಾಡಿದ ಆರ್‌ಸಿಬಿ
ಕಳೆದ ಮೂರ್ನಾಲ್ಕು ದಿನಗಳಿಂದಲೇ ಆಭ್ಯಾಸವನ್ನ ಶುರುಮಾಡಿರುವ ತಂಡದ ಆಟಗಾರರು ಈ ಬಾರಿ ಶತಯಾ ಗತಯಾ ಏನಾದ್ರೂ ಮಾಡಿ ಕಪ್‌ನ ಉಳಿಸಿಕೊಳ್ಳಲೇಬೇಕು ಎಂಬ ಹಠವನ್ನ ತೊಟ್ಟಿದ್ದು ಇದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ ಎನ್ನಬಹುದಾಗಿದೆ. ಈಗಾಗಲೇ ಅಭ್ಯಾಸ ಪಂದ್ಯದಲ್ಲಿ ಪ್ರಮುಖ ಆಟಗಾರ ಯಶ್ ದಯಾಳ್ ಗೈರಾಗಿದ್ದುಇದಕ್ಕೆ ಕೊಹ್ಲಿ ಗರಂ ಆಗಿದ್ದಾರೆ ಎಂಬಂತಹ ಮಾಹಿತಿಗಳು ಆರ್‌ಸಿಬಿ ಮೂಲಗಳಿಂದ ಕೇಳಿ ಬಂದಿದೆ. ಒಟ್ಟಿನಲ್ಲಿ ಈ ಬಾರಿಯೂ ಕೂಡ ಆರ್‌ಸಿಬಿ ತಂಡವೇ ಕಪ್ ಗೆಲ್ಲಲಿ ಎನ್ನುವುದು ಎಲ್ಲರ ಆಶಯವಾಗಿದೆ.





