ವಾಷಿಂಗ್ಟನ್: ಇರಾನ್ ದೇಶದ ನಡೆಯಿಂದ ಕೆರಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ಬಿಗ್ ವಾರ್ನಿಂಗ್ ನೀಡಿದ್ದಾರೆ. ಹರ್ಮುಜ್ ಜಲಸಂದಿಯನ್ನು (Strait of Hormuz) ಮುಚ್ಚಿರುವ ಇರಾನ್ ಕ್ರಮಕ್ಕೆ ಪ್ರತಿಯಾಗಿ ಟ್ರಂಪ್ 24 ಗಂಟೆ ಗಡುವು ನೀಡಿದ್ದಾರೆ.
ಹರ್ಮುಜ್ ಜಲಸಂದಿ ಬಂದ್
ವಿಶ್ವದ ಒಟ್ಟು ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹರ್ಮುಜ್ ಜಲಸಂದಿಯನ್ನು ಇರಾನ್ ಮುಚ್ಚಿರುವುದು ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಎಲ್‌ಪಿಜಿ (LPG) ಅಭಾವಕ್ಕೆ ಕಾರಣವಾಗಿದೆ. ಈ ಒಂದು ನಿರ್ಧಾರದಿಂದಾಗಿ ವಿಶ್ವಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ. ಕೈಗಾರಿಕೆಗಳು ಮತ್ತು ಸಾರಿಗೆ ವ್ಯವಸ್ಥೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಈ ಆರ್ಥಿಕ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಂಪ್, ಇರಾನ್ ವಿರುದ್ಧ ನೇರ ಸಮರ ಸಾರಿದ್ದಾರೆ.
ಟ್ರಂಪ್ ನೀಡಿದ 24 ಗಂಟೆಗಳ ಡೆಡ್‌ಲೈನ್
ಇನ್ನು 24 ಗಂಟೆಯೊಳಗೆ ಹರ್ಮುಜ್ ಜಲಸಂದಿಯನ್ನು ಮುಕ್ತಗೊಳಿಸದಿದ್ದರೆ, ವಿಶ್ವ ಭೂಪಟದಿಂದ ಇರಾನ್ ದೇಶವನ್ನೇ ಅಳಿಸಿ ಹಾಕುತ್ತೇನೆ ಎಂದು ಟ್ರಂಪ್ ಗುಡುಗಿದ್ದಾರೆ. ಇರಾನ್‌ನ ಇಂಧನ ಮೂಲಗಳು ಮತ್ತು ಅಣು ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ಇರಾನ್‌ನ ಪ್ರಮುಖ ತೈಲ ಕೇಂದ್ರವಾದ ಖರ್ಗ್ ದ್ವೀಪವನ್ನು (Kharg Island) ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ಕೈವಶ ಮಾಡಿಕೊಳ್ಳಲಿವೆಯೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ.
ಇರಾನ್‌ನ ಆರ್ಥಿಕತೆಯ ಬೆನ್ನೆಲುಬಾಗಿರುವ ಅದರ ತೈಲ ಸಂಸ್ಕರಣಾ ಘಟಕಗಳು ಮತ್ತು ಗಣಿಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದು ಅಮೆರಿಕದ ಉದ್ದೇಶವಾಗಿದೆ. ಟ್ರಂಪ್ ಅವರ ಈ ಹೇಳಿಕೆಯು ಇರಾನ್‌ನ ಅಣು ವಿದ್ಯುತ್ ಸ್ಥಾವರಗಳ ಮೇಲೆಯೂ ದಾಳಿ ನಡೆಯಬಹುದು ಎಂಬ ಮುನ್ಸೂಚನೆ ನೀಡಿದೆ. ಇಸ್ರೇಲ್ ಸಹ ಅಮೆರಿಕದ ಈ ನಿರ್ಧಾರಕ್ಕೆ ಬೆಂಬಲ ನೀಡುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಯುದ್ಧದ ಕಾರ್ಮೋಡ ಕವಿದಿದೆ.
ತೈಲ ಬೆಲೆ ಏರಿಕೆಯಿಂದಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಈ ಕಠಿಣ ನಿಲುವು ಜಾಗತಿಕ ಮಾರುಕಟ್ಟೆಯನ್ನು ಸರಿಪಡಿಸುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದ್ದರೂ, ಯುದ್ಧ ನಡೆದರೆ ಅದು ಜಗತ್ತನ್ನು ವಿನಾಶದತ್ತ ಕೊಂಡೊಯ್ಯಬಹುದು ಎಂಬ ಆತಂಕ ಮನೆ ಮಾಡಿದೆ.





