ಮುಂಬೈ/ನಾಸಿಕ್, ಮಾ.20: ಆಧ್ಯಾತ್ಮ ಮತ್ತು ಜ್ಯೋತಿಷ್ಯದ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಕರಣವೊಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಭಾವಿ ಜ್ಯೋತಿಷಿ ಅಶೋಕ್ ಖರಾತ್ (Ashok Kharat) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ಕಚೇರಿಯಲ್ಲಿ ಅಳವಡಿಸಿದ್ದ ರಹಸ್ಯ ಕ್ಯಾಮೆರಾಗಳಲ್ಲಿ 58 ಮಹಿಳೆಯರ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.
ಈತ ತನ್ನನ್ನು ಶಕ್ತಿಶಾಲಿ ಜ್ಯೋತಿಷಿ ಮತ್ತು ಆಧ್ಯಾತ್ಮಿಕ ಗುರು ಎಂದು ಪರಿಚಯಿಸಿಕೊಂಡು ಮಹಿಳೆಯರ ವಿಶ್ವಾಸ ಗಳಿಸುತ್ತಿದ್ದ. ಕುಟುಂಬ ಸಮಸ್ಯೆಗಳು, ಆರೋಗ್ಯ ತೊಂದರೆಗಳು ಮತ್ತು ವೈಯಕ್ತಿಕ ಸಂಕಷ್ಟಗಳನ್ನು ಪರಿಹರಿಸುವ ಭರವಸೆ ನೀಡಿ ಮಹಿಳೆಯರನ್ನು ತನ್ನ ಕಚೇರಿಗೆ ಕರೆಯಿಸಿಕೊಂಡು, ನಂತರ ಅವರ ಮೇಲೆ ಅಮಾನುಷ ಕೃತ್ಯಗಳನ್ನು ಎಸಗುತ್ತಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ.
ಆರೋಪಿ ತನ್ನ ಕಚೇರಿಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದ. ಪೊಲೀಸರು ವಶಪಡಿಸಿಕೊಂಡ ಪೆನ್‌ಡ್ರೈವ್‌ನಲ್ಲಿ ಸುಮಾರು 58 ಮಹಿಳೆಯರೊಂದಿಗೆ ನಡೆದ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಈ ವಿಡಿಯೋಗಳನ್ನು ಬಳಸಿಕೊಂಡು ಮಹಿಳೆಯರನ್ನು ಬೆದರಿಸಿ ಮತ್ತಷ್ಟು ಶೋಷಣೆ ನಡೆಸುತ್ತಿದ್ದನು ಎನ್ನಲಾಗಿದೆ.
ಸಂತ್ರಸ್ತೆಯೊಬ್ಬಳು ನೀಡಿದ ದೂರಿನ ಪ್ರಕಾರ, ಖರಾತ್ ತನ್ನ ಬಳಿ ಬರುವ ಮಹಿಳೆಯರಿಗೆ ಅಮಲು ಪದಾರ್ಥ ನೀಡಿ, ಅವರನ್ನು ವಶೀಕರಣ ಮಾಡಿದಂತೆ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ‘ನಿನ್ನ ಪತಿಗೆ ಅಪಾಯ ಇದೆ’, ‘ಮಾಟಮಂತ್ರದ ಶಾಪದಿಂದ ತಪ್ಪಿಸಿಕೊಳ್ಳಲು ವಿಶೇಷ ಪೂಜೆ ಬೇಕು’ ಎಂಬ ಭಯ ಹುಟ್ಟಿಸಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.
ಅಶೋಕ್ ಖರಾತ್ ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿ ಎಂಬ ಹೆಸರನ್ನೂ ಬಳಸಿಕೊಂಡು ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದ. ತನ್ನನ್ನು ‘ಕ್ಯಾಪ್ಟನ್’ ಎಂದು ಕರೆಸಿಕೊಳ್ಳುತ್ತಿದ್ದ ಈತ, ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಂತೆ ಕಾಣಿಸಿಕೊಂಡು ಜನರನ್ನು ಮೋಸಗೊಳಿಸುತ್ತಿದ್ದ. ನಾಸಿಕ್‌ನ ಕೆನಡಾ ಕಾರ್ನರ್ ಪ್ರದೇಶದಲ್ಲಿ ‘ಓಕಸ್ ಪ್ರಾಪರ್ಟಿ ಡೀಲರ್ಸ್ ಅಂಡ್ ಡೆವಲಪರ್ಸ್’ ಎಂಬ ಹೆಸರಿನಲ್ಲಿ ಕಚೇರಿ ನಡೆಸುತ್ತಿದ್ದರೂ, ಅಲ್ಲಿ ನಡೆಯುತ್ತಿದ್ದದ್ದು ಅಪರಾಧ ಚಟುವಟಿಕೆಗಳೇ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಕೂಡ ಈತನನ್ನು ಭೇಟಿಯಾಗಿದ್ದರೆಂಬ ಮಾಹಿತಿ ತನಿಖೆಯಲ್ಲಿ ಹೊರಬರುತ್ತಿದೆ. ಈ ಪ್ರಕರಣದ ಬಗ್ಗೆ ತಣಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿದೆ. ಐಪಿಎಸ್ ಅಧಿಕಾರಿ ತೇಜಸ್ವಿನಿ ಸಾತ್ಪುತೆ ನೇತೃತ್ವದಲ್ಲಿ ನಡೆಯುತ್ತಿರುವ ಈ ತನಿಖೆ, ಪ್ರಕರಣದ ಆಳವನ್ನು ಪತ್ತೆಹಚ್ಚಲು ಮುಂದಾಗಿದೆ. ನಾಸಿಕ್ ಕ್ರೈಮ್ ಬ್ರಾಂಚ್ ಈಗಾಗಲೇ ಹಲವು ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದೆ.
ಬಂಧನ ಕಾರ್ಯಾಚರಣೆ ಕೂಡ ಡ್ರಾಮಾ ನಡೆದಿದ್ದು, ಪೊಲೀಸರ ತಂಡ ಆರೋಪಿ ಫಾರ್ಮ್‌ಹೌಸ್ ಬಳಿ “ಕಳ್ಳ, ಕಳ್ಳ” ಎಂದು ಕೂಗಿ ಗೊಂದಲ ಸೃಷ್ಟಿಸಿ ಒಳನುಗ್ಗಿದೆ. ಈ ವೇಳೆ ಬೆಡ್‌ರೂಮ್‌ನಲ್ಲಿ ಇದ್ದ ಖರಾತ್‌ನ್ನು ಬಂಧಿಸಲಾಗಿದೆ. ದಾಳಿಯ ವೇಳೆ ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಕೆಲವು ಹಳೆಯ ಶಸ್ತ್ರಾಸ್ತ್ರಗಳೂ ಪತ್ತೆಯಾಗಿವೆ.





