ನವದೆಹಲಿ, ಮಾರ್ಚ್ 19: ಕೇಂದ್ರ ಸರ್ಕಾರವು ಅಗತ್ಯ ಔಷಧಗಳ ವಾರ್ಷಿಕ ಬೆಲೆ ಪರಿಷ್ಕರಣೆಯನ್ನು ಪ್ರಕಟಿಸಿದ್ದು, ಈ ವರ್ಷ ಶೇಕಡ 0.6 ರಷ್ಟು ದರ ಹೆಚ್ಚಳಕ್ಕೆ ಅವಕಾಶ ಕಲ್ಪಿಸಿದೆ. ಅಗತ್ಯ ಔಷಧಗಳ ಪಟ್ಟಿಯಲ್ಲಿರುವ 1000ಕ್ಕೂ ಹೆಚ್ಚು ಔಷಧಗಳಿಗೆ ಈ ಪರಿಷ್ಕೃತ ದರ ಅನ್ವಯವಾಗಲಿದ್ದು, ನೋವು ನಿವಾರಕಗಳು, ಆಂಟಿಬಯಾಟಿಕ್ಸ್, ಸೋಂಕು ನಿವಾರಕಗಳು, ಮಧುಮೇಹ ನಿರೋಧಕ ಔಷಧಗಳು ಮತ್ತು ಕ್ಯಾನ್ಸರ್ ಔಷಧಗಳ ಬೆಲೆ ಶೇಕಡ 0.6 ರಷ್ಟು ಹೆಚ್ಚಾಗಲಿದೆ. ಈ ಹೊಸ ದರಗಳು ಏಪ್ರಿಲ್ 1, 2026ರಿಂದ ಜಾರಿಗೆ ಬರಲಿವೆ.
ಯಾವೆಲ್ಲಾ ಔಷಧಗಳ ಬೆಲೆ ಏರಿಕೆ?
ಅಗತ್ಯ ಔಷಧಗಳ ಪಟ್ಟಿಯಲ್ಲಿ ಸೇರಿರುವ ಪ್ರಮುಖ ಔಷಧಗಳ ಬೆಲೆ ಏರಿಕೆಯಾಗಲಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಬಳಸುವ ಪ್ಯಾರಾಸೆಟಮಾಲ್ (ನೋವು ನಿವಾರಕ), ಅಜಿಥೋಮೈಸಿನ್ ನಂತಹ ಆಂಟಿಬಯಾಟಿಕ್ಸ್, ರಕ್ತಹೀನತೆ ನಿವಾರಣೆ ಔಷಧಗಳು, ವಿಟಮಿನ್ ಮತ್ತು ಖನಿಜಗಳ ಅಗತ್ಯಕ್ಕೆ ಬಳಸುವ ಔಷಧಗಳು, ಮಧುಮೇಹ ನಿರೋಧಕ ಔಷಧಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಕೆಲವು ಔಷಧಗಳು ಈ ಪಟ್ಟಿಯಲ್ಲಿ ಸೇರಿವೆ.
ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರ (NPPA) ವರ್ಷಕ್ಕೊಮ್ಮೆ ಈ ಬೆಲೆ ಪರಿಷ್ಕರಣೆಯನ್ನು ನಡೆಸುತ್ತದೆ. ಈ ಬಾರಿಯ ಏರಿಕೆ ಪ್ರಮಾಣ ಶೇಕಡ 0.6 ರಷ್ಟು ಮಾತ್ರವಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆಯಾಗಿದೆ.
ಹಿಂದಿನ ವರ್ಷಗಳ ಏರಿಕೆ ಪ್ರಮಾಣ ಎಷ್ಟು?
ಅಗತ್ಯ ಔಷಧಗಳ ಬೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಗಣನೀಯ ಏರಿಕೆಯಾಗುತ್ತಲೇ ಇದೆ. 2022ರಲ್ಲಿ ಶೇಕಡ 10 ರಷ್ಟು, 2023ರಲ್ಲಿ ಶೇಕಡ 12 ರಷ್ಟು ಔಷಧಗಳ ದರ ಏರಿಕೆಯಾಗಿತ್ತು. ಆದರೆ ಈ ವರ್ಷ ಕೇವಲ ಶೇಕಡ 0.6 ರಷ್ಟು ಮಾತ್ರ ಏರಿಕೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಇದು ಔಷಧ ತಯಾರಿಕಾ ಕಂಪನಿಗಳಿಗೆ ನಿರಾಶೆ ತಂದಿದೆ.
ಔಷಧ ಉದ್ಯಮದ ಆತಂಕ ಏನು?
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸಂಘರ್ಷಗಳು ಮತ್ತು ಆರ್ಥಿಕ ಅನಿಶ್ಚಿತತೆಗಳಿಂದಾಗಿ ಔಷಧ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಸಗಟು ಬೆಲೆ ಸೂಚ್ಯಂಕವೂ (WPI) ಏರುಗತಿಯಲ್ಲಿದ್ದು, ಔಷಧ ಉದ್ಯಮದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಔಷಧ ತಯಾರಿಕಾ ಕಂಪನಿಗಳು ಕೇಂದ್ರ ಸರ್ಕಾರದ ಮೊರೆ ಹೋಗಲು ಸಜ್ಜಾಗಿವೆ. ಶೇಕಡ 0.6 ಕ್ಕಿಂತ ಹೆಚ್ಚು ದರ ಹೆಚ್ಚಳದ ಅಗತ್ಯವಿದೆ ಎಂದು ಅವರು ವಾದಿಸುತ್ತಿದ್ದಾರೆ. ಈ ಸಂಗತಿಯನ್ನು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದ (NPPA) ಮುಂದೆ ಮಂಡಿಸುವುದಾಗಿ ಔಷಧ ತಯಾರಿಕಾ ಕಂಪನಿಯೊಂದರ ಪ್ರತಿನಿಧಿ ತಿಳಿಸಿದ್ದಾರೆ.
ಶೇಕಡ 0.6 ರಷ್ಟು ಏರಿಕೆಯು ತುಂಬಾ ಕಡಿಮೆ ಇರುವುದರಿಂದ ಸಾಮಾನ್ಯ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಆದರೆ ಔಷಧ ಉದ್ಯಮದ ಒತ್ತಾಯದ ಮೇರೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ..





