ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಾಣಿಜ್ಯ ಮತ್ತು ಗೃಹಬಳಕೆಯ ಸಿಲಿಂಡರ್‌ಗಳ ಕೊರತೆ ಜನಸಾಮಾನ್ಯರನ್ನು ಕಾಡುತ್ತಿದೆ. ಈ ಬಿಕ್ಕಟ್ಟನ್ನೇ ಬಂಡವಾಳ ಮಾಡಿಕೊಂಡಿರುವ ಕಾಳಸಂತೆ ಕೋರರು, ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ದೇಶಾದ್ಯಂತ ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ ಸಾವಿರಾರು ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಲಿಂಡರ್‌ಗಳ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಅಕ್ರಮ ದಾಸ್ತಾನು ಮತ್ತು ಬ್ಲಾಕ್ ಮಾರ್ಕೆಟ್ ದಂಧೆಯನ್ನು ಹತ್ತಿಕ್ಕಲು ಪೊಲೀಸರು ದೇಶದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಕರ್ನಾಟಕ ಸೇರಿದಂತೆ ದೆಹಲಿ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ ಮತ್ತು ಕೇರಳದ ಸುಮಾರು 12 ಸಾವಿರಕ್ಕೂ ಹೆಚ್ಚು ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯ ಫಲವಾಗಿ ಒಟ್ಟು 15,000 ಅಕ್ರಮ ಸಿಲಿಂಡರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪ್ರಮುಖ ನಗರಗಳ ವರದಿ:
-
ದೆಹಲಿ: ಇಲ್ಲಿನ ವಿವಿಧ ಗೋದಾಮುಗಳ ಮೇಲೆ ದಾಳಿ ನಡೆಸಿ 600ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ.
-
ಉತ್ತರ ಪ್ರದೇಶ: ಇಲ್ಲಿ 405ಕ್ಕೂ ಹೆಚ್ಚು ಕಡೆ ತಪಾಸಣೆ ನಡೆಸಲಾಗಿದ್ದು, ಈ ಅಕ್ರಮ ಜಾಲದಲ್ಲಿ ಭಾಗಿಯಾಗಿದ್ದ 10 ಮಂದಿಯನ್ನು ಬಂಧಿಸಲಾಗಿದೆ.
-
ಜಮ್ಮು ಕಾಶ್ಮೀರ: ಇಲ್ಲಿ 504 ಕಡೆ ದಾಳಿ ನಡೆಸಿ ಸರಣಿ ಎಫ್‌ಐಆರ್ ದಾಖಲಿಸಲಾಗಿದೆ.
ಸಿಲಿಂಡರ್ ಕೊರತೆಯಿಂದ ಕಂಗೆಟ್ಟಿರುವ ಕರ್ನಾಟಕದಲ್ಲಿಯೂ ಪೊಲೀಸರು ಭರ್ಜರಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬೀದರ್‌ನಲ್ಲಿ ಅತಿ ಹೆಚ್ಚು ಅಂದರೆ 105 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆ ಮತ್ತು ಯಾದಗಿರಿಯಲ್ಲಿ ತಲಾ 20 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದ್ದು, ಅಕ್ರಮವಾಗಿ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಅಭಾವ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಹೋಟೆಲ್ ಮಾಲೀಕರನ್ನು ಕಂಗೆಡಿಸಿದೆ. ಸಕಾಲಕ್ಕೆ ಸಿಲಿಂಡರ್ ಸಿಗದೆ ಅಥವಾ ಕಾಳಸಂತೆಯಲ್ಲಿ ದುಬಾರಿ ದರ ನೀಡಲು ಸಾಧ್ಯವಾಗದೆ ಹಲವಾರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಈ ಅಭಾವವು ಹೋಟೆಲ್ ಊಟದ ದರ ಏರಿಕೆಯಾಗುವ ಆತಂಕವನ್ನೂ ಸೃಷ್ಟಿಸಿದೆ.
ಅಧಿಕೃತ ಏಜೆನ್ಸಿಗಳನ್ನು ಹೊರತುಪಡಿಸಿ ಬೇರೆ ಕಡೆ ಸಿಲಿಂಡರ್ ಖರೀದಿಸದಂತೆ ಮತ್ತು ಅಕ್ರಮ ದಂಧೆಯ ಬಗ್ಗೆ ಮಾಹಿತಿ ಇದ್ದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಗುಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ.





