ಬೆಂಗಳೂರು (ಮಾ.13): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಗಳ ಪರಿಣಾಮ ಇದೀಗ ಸಾಮಾನ್ಯ ಜನರ ದಿನನಿತ್ಯದ ಬದುಕಿನ ಮೇಲೆ ತಟ್ಟಿದೆ. ಇದರ ನೇರ ಹೊಡೆತ ಈಗ ಭಾರತದ ಹೆಮ್ಮೆಯ ಐಟಿ ಸಂಸ್ಥೆ ಇನ್ಫೋಸಿಸ್‌ಗೂ ತಟ್ಟಿದೆ. ಇನ್ಫೋಸಿಸ್‌ನ ಪ್ರಮುಖ ಕ್ಯಾಂಪಸ್‌ಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಕೊರತೆ ಉಂಟಾಗಿದ್ದು, ಸಾವಿರಾರು ಉದ್ಯೋಗಿಗಳಿಗೆ ಊಟದ ಸಮಸ್ಯೆ ಎದುರಾಗಿದೆ.
ದೇಶದ ಐಟಿ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ತನ್ನ ಕೆಲವು ಪ್ರಮುಖ ಕ್ಯಾಂಪಸ್‌ಗಳಲ್ಲಿ ಕಮರ್ಷಿಯಲ್ ಗ್ಯಾಸ್ ಕೊರತೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ ಕಂಪನಿಯ ಕ್ಯಾಂಟೀನ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಉದ್ಯೋಗಿಗಳಿಗೆ ಆಹಾರ ವ್ಯವಸ್ಥೆಯಲ್ಲಿ ಅಡಚಣೆ ಎದುರಾಗುತ್ತಿದೆ. ಬೆಂಗಳೂರು, ಚೆನ್ನೈ ಮತ್ತು ಪುಣೆ ನಗರಗಳಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ಗಳಲ್ಲಿ ಈ ಸಮಸ್ಯೆ ಹೆಚ್ಚು ಗಮನ ಸೆಳೆದಿದೆ.
ಕ್ಯಾಂಟೀನ್‌ನಲ್ಲಿ ಗ್ಯಾಸ್ ಕೊರತೆ
ಕ್ಯಾಂಪಸ್‌ಗಳಲ್ಲಿ ಕಾರ್ಯನಿರ್ವಹಿಸುವ ಫುಡ್ ಕೋರ್ಟ್‌ಗಳಲ್ಲಿ ಸಾಮಾನ್ಯವಾಗಿ ಸಾವಿರಾರು ಉದ್ಯೋಗಿಗಳಿಗೆ ಬಿಸಿ ಬಿಸಿ ಆಹಾರವನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಕಾಣಿಸಿಕೊಂಡಿದೆ. ಇದರಿಂದ ಕ್ಯಾಂಟೀನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ.
ಉದ್ಯೋಗಿಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದ ‘ಲೈವ್ ಕೌಂಟರ್‌ಗಳು’ ಈಗ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಸಾಮಾನ್ಯವಾಗಿ ಈ ಕೌಂಟರ್‌ಗಳಲ್ಲಿ ದೋಸೆ, ಚಾಟ್, ಪಾಸ್ತಾ ಮತ್ತು ಇನ್ನಿತರ ಬಿಸಿ ಬಿಸಿ ತಿಂಡಿಗಳನ್ನು ಸ್ಥಳದಲ್ಲೇ ತಯಾರಿಸಿ ನೀಡಲಾಗುತ್ತಿತ್ತು. ಆದರೆ ಗ್ಯಾಸ್ ಕೊರತೆಯಿಂದಾಗಿ ಈ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮಾರ್ಚ್ 12ರಿಂದ ಹೊಸ ಸೂಚನೆ
ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇನ್ಫೋಸಿಸ್ ಆಡಳಿತವು ತನ್ನ ಉದ್ಯೋಗಿಗಳಿಗೆ ಮಹತ್ವದ ಇಮೇಲ್ ಮೂಲಕ ಮಾಹಿತಿ ನೀಡಿದೆ. ಮಾರ್ಚ್ 12ರಿಂದಲೇ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಲಾಗಿದೆ.
ಕ್ಯಾಂಟೀನ್‌ನಲ್ಲಿ ಲಭ್ಯವಿರುವ ಆಹಾರದ ಮೆನು ಈಗ ಸೀಮಿತವಾಗಿದ್ದು, ಕೆಲವೇ ಕೆಲವು ಪದಾರ್ಥಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಇದರಿಂದ ಎಲ್ಲ ಉದ್ಯೋಗಿಗಳಿಗೆ ಬೇಕಾದಷ್ಟು ಆಯ್ಕೆಗಳು ಲಭ್ಯವಿಲ್ಲ. ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಸಹಕರಿಸುವಂತೆ ಕಂಪನಿ ಸಿಬ್ಬಂದಿಗೆ ಮನವಿ ಮಾಡಿದೆ.
ಮನೆಯಿಂದ ಊಟ ತರಲು ಸಲಹೆ
ಕ್ಯಾಂಟೀನ್ ಸೇವೆಗಳಲ್ಲಿ ಉಂಟಾದ ಈ ವ್ಯತ್ಯಯದ ಹಿನ್ನೆಲೆ ಕಂಪನಿ ತನ್ನ ಸಿಬ್ಬಂದಿಗೆ ‘ಮನೆಯಿಂದಲೇ ಊಟದ ಬಾಕ್ಸ್ ತರಲು’ ಸಲಹೆ ನೀಡಿದೆ. ಒಂದು ವೇಳೆ ಮನೆಯಿಂದ ಆಹಾರ ತರಲು ಸಾಧ್ಯವಾಗದಿದ್ದರೆ, ಹೊರಗಿನ ಆಹಾರ ವಿತರಣಾ ಸೇವೆಗಳ ಮೂಲಕ ಆಹಾರವನ್ನು ಆರ್ಡರ್ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ. ದಿನನಿತ್ಯದ ಕೆಲಸದ ಒತ್ತಡದ ನಡುವೆ ಇದೀಗ ಆಹಾರದ ವ್ಯವಸ್ಥೆಯನ್ನೂ ಉದ್ಯೋಗಿಗಳು ತಾವೇ ನೋಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಹೊರಗಿನ ಕೇಟರಿಂಗ್ ಮೂಲಕ ಆಹಾರ
ಕ್ಯಾಂಪಸ್ ಒಳಗೆ ಅಡುಗೆ ಮಾಡಲು ಸಾಧ್ಯವಾಗದ ಕಾರಣ, ಕಂಪನಿಯು ಕೆಲವು ಹೊರಗಿನ ಕೇಟರಿಂಗ್ ಸಂಸ್ಥೆಗಳ ಸಹಾಯವನ್ನು ಪಡೆದುಕೊಂಡಿದೆ. ಇವುಗಳಿಂದ ಬೇಯಿಸಿದ ಆಹಾರವನ್ನು ಕ್ಯಾಂಪಸ್‌ಗೆ ತರಿಸಿ ವಿತರಿಸಲಾಗುತ್ತಿದೆ.
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ವಿಶೇಷವಾಗಿ ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ನೈಸರ್ಗಿಕ ಅನಿಲ ಹಾಗೂ ಎಲ್‌ಪಿಜಿ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದರ ಪರಿಣಾಮವಾಗಿ ಹಲವು ದೇಶಗಳಲ್ಲಿ ವಾಣಿಜ್ಯ ಬಳಕೆಯ ಅನಿಲದ ಸರಬರಾಜು ಕುಂಠಿತವಾಗಿದ್ದು, ಅದರ ಪರಿಣಾಮ ಈಗ ಭಾರತದಲ್ಲಿನ ಕೆಲವು ಸಂಸ್ಥೆಗಳ ಮೇಲೂ ಕಾಣಿಸುತ್ತಿದೆ.
ಐಟಿ ಹಬ್‌ಗಳಿಗೂ ಬಿಸಿ
ಬೆಂಗಳೂರು, ಚೆನ್ನೈ, ಪುಣೆ ಮುಂತಾದ ನಗರಗಳು ದೇಶದ ಪ್ರಮುಖ ಐಟಿ ಹಬ್‌ಗಳಾಗಿವೆ. ಇಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಮಾಡುವ ದೊಡ್ಡ ಕ್ಯಾಂಪಸ್‌ಗಳಲ್ಲಿ ಆಹಾರ ವ್ಯವಸ್ಥೆ ಬಹಳ ಮುಖ್ಯವಾಗಿರುತ್ತದೆ.





