ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಯುವತಿಯೊಬ್ಬಳು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಮೊನಲಿಸಾ ಭೋಸ್ಲೆ, ಕೇವಲ ಒಂದು ವೈರಲ್ ಫೋಟೋದಿಂದ ಸಿನಿಮಾ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಮ್ಮ ವೈಯಕ್ತಿಕ ಜೀವನದ ದೊಡ್ಡ ನಿರ್ಧಾರಕ್ಕಾಗಿ ಕೇರಳದ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಪ್ರಕರಣದ ಹಿನ್ನೆಲೆ
ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾದ ಮೊನಲಿಸಾ ಭೋಸ್ಲೆ, ಸದ್ಯ ಸಿನಿಮಾ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಆಗಮಿಸಿದ್ದರು. ಆದರೆ, ಈ ನಡುವೆ ಅವರು ತಿರುವನಂತಪುರದ ಥಂಪನೂರು ಪೊಲೀಸ್ ಠಾಣೆಗೆ ತಮ್ಮ ಪ್ರೇಮಿ ಫರ್ಮಾನ್ ಖಾನ್ ಜೊತೆ ಭೇಟಿ ನೀಡಿ ಪೋಷಕರ ವಿರುದ್ಧವೇ ದೂರು ದಾಖಲಿಸಿದ್ದಾರೆ. ತಮ್ಮ ಪೋಷಕರು ತಮಗೆ ಇಷ್ಟವಿಲ್ಲದಿದ್ದರೂ ಬಲವಂತದ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಂತರ್ಧರ್ಮೀಯ ವಿವಾಹಕ್ಕೆ ವಿರೋಧ:
ಮೊನಾಲಿಸಾ ಮತ್ತು ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದಾರೆ. ಇವರ ಪ್ರೀತಿಗೆ ಮೊನಾಲಿಸಾ ಅವರ ತಂದೆ ವಿಜಯ್ ಸಿಂಗ್ ಭೋಂಸ್ಲೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಂತರ್ಧರ್ಮೀಯ ವಿವಾಹ ಎಂಬ ಕಾರಣಕ್ಕೆ ಮನೆಯಲ್ಲಿ ಮಾನಸಿಕ ಒತ್ತಡ ಹೇರಲಾಗುತ್ತಿತ್ತು. ಇದರಿಂದ ಬೇಸತ್ತ ಮೊನಲಿಸಾ, ತಾನು ವಯಸ್ಕಳಾಗಿದ್ದು ತನ್ನ ಜೀವನದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ತನಗಿದೆ ಎಂದು ಪೊಲೀಸರ ರಕ್ಷಣೆ ಕೋರಿದ್ದಾರೆ.
ಪೊಲೀಸ್ ಮಧ್ಯಸ್ಥಿಕೆ
ಮೊನಲಿಸಾ ಅವರ ದೂರನ್ನು ಸ್ವೀಕರಿಸಿದ ಪೊಲೀಸರು, ಆಕೆಯ ತಂದೆಯನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಮೊನಲಿಸಾ ವಯಸ್ಕಳಾಗಿರುವುದರಿಂದ ಕಾನೂನುಬದ್ಧವಾಗಿ ಆಕೆಗೆ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಶೇಷವೆಂದರೆ, ಈ ಪ್ರೇಮಿಗಳಿಗೆ ಕೇರಳದ ಸ್ಥಳೀಯ ರಾಜಕೀಯ ನಾಯಕರು ಬೆಂಬಲ ನೀಡಿದ್ದಾರೆ. ಇಂದು ಸಂಜೆ ಕೇರಳದ ವಿಝಿಂಜಂನಲ್ಲಿರುವ ದೇವಸ್ಥಾನವೊಂದರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವೈರಲ್ ಸುಂದರಿ ಮೊನಲಿಸಾ ಪ್ರಸ್ತುತ ‘ನಾಗಮ್ಮ’ ಎಂಬ ಮಲಯಾಳಂ ಸಿನಿಮಾ ಹಾಗೂ ‘ಲೈಫ್’ ಎಂಬ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವೃತ್ತಿಜೀವನದಲ್ಲಿ ಉತ್ತುಂಗಕ್ಕೆ ಏರುತ್ತಿರುವಾಗಲೇ ಅವರು ತಮ್ಮ ಪ್ರೀತಿಗಾಗಿ ಗಟ್ಟಿಯಾದ ನಿರ್ಧಾರ ತೆಗೆದುಕೊಂಡಿರುವುದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.





