ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಆಮದಿನಲ್ಲಿ ವ್ಯತ್ಯಯ ಉಂಟಾಗಿದ್ದು, ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆ ಶೂನ್ಯಕ್ಕೇರಿದೆ. ಇದರಿಂದಾಗಿ ಹೋಟೆಲ್ ಉದ್ಯಮ ಸ್ತಬ್ಧವಾಗುವ ಭೀತಿ ಎದುರಾಗಿತ್ತು. ಆದರೆ, ಉದ್ಯಮವನ್ನು ಉಳಿಸಿಕೊಳ್ಳಲು ಮಾಲೀಕರು ಈಗ ಹಳೆಯ ಕಾಲದ ಸೌದೆ ಒಲೆಗಳ ಮೊರೆ ಹೋಗಿದ್ದಾರೆ.
ಗ್ಯಾಸ್ ಸಿಲಿಂಡರ್‌ಗಳು ಮಾರುಕಟ್ಟೆಯಲ್ಲಿ ದೊರೆಯದ ಕಾರಣ, ಅಡುಗೆ ಮನೆಯ ಹೈಟೆಕ್ ಸ್ಟೌವ್‌ಗಳು ಈಗ ಮೂಲೆ ಸೇರಿವೆ. ಹೋಟೆಲ್ ಮಾಲೀಕರು ಟ್ರಕ್ ಗಟ್ಟಲೆ ಸೌದೆಯನ್ನು ತರಿಸಿಕೊಳ್ಳುತ್ತಿದ್ದಾರೆ. ಲಭ್ಯವಿರುವ ಮಾಹಿತಿಯಂತೆ, ಒಬ್ಬೊಬ್ಬ ಮಾಲೀಕರು 10 ರಿಂದ 15 ಕ್ವಿಂಟಾಲ್ ಸೌದೆಯನ್ನು ಸ್ಟಾಕ್ ಮಾಡಿಕೊಂಡಿದ್ದಾರೆ. ಹೋಟೆಲ್‌ನ ಹಿತ್ತಲಲ್ಲಿ ಅಥವಾ ಅಡುಗೆ ಮನೆಯ ಒಂದು ಮೂಲೆಯಲ್ಲಿ ಬೃಹತ್ ಸೌದೆ ಒಲೆಗಳನ್ನು ನಿರ್ಮಿಸಿ, ಅಲ್ಲಿಯೇ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ತಯಾರಿಸಲಾಗುತ್ತಿದೆ.
ಮೆನುವಿನಲ್ಲಿ ಭಾರಿ ಬದಲಾವಣೆ
ಸೌದೆ ಒಲೆ ಮೇಲೆ ಎಲ್ಲಾ ರೀತಿಯ ಖಾದ್ಯಗಳನ್ನು ತಯಾರಿಸುವುದು ಸವಾಲಿನ ಕೆಲಸ. ಹೀಗಾಗಿ, ಹೋಟೆಲ್ ಮೆನುವಿನಲ್ಲಿ ಭಾರಿ ಕಡಿತ ಮಾಡಲಾಗಿದೆ. ವಿಶೇಷವಾಗಿ ಗ್ಯಾಸ್ ಹೆಚ್ಚು ವ್ಯಯವಾಗುವ ಮತ್ತು ಹೆಚ್ಚಿನ ಉರಿ ಬೇಕಾಗುವ ಚೈನೀಸ್ ಫುಡ್ (ನೂಡಲ್ಸ್, ಫ್ರೈಡ್ ರೈಸ್), ಸೂಪ್‌ಗಳು ಹಾಗೂ ದೋಸೆಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ಕೇವಲ ಇಡ್ಲಿ, ಪಲಾವ್, ರೈಸ್ ಸಾಂಬಾರ್‌ನಂತಹ ಸೌದೆ ಒಲೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಪದಾರ್ಥಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ.
ಗ್ಯಾಸ್ ಇಲ್ಲದಿದ್ದರೆ ಹೋಟೆಲ್ ಬಂದ್ ಮಾಡಬೇಕಾದ ಪರಿಸ್ಥಿತಿ ಇತ್ತು. ಆದರೆ ಕಾರ್ಮಿಕರ ಹಿತದೃಷ್ಟಿಯಿಂದ ಸೌದೆ ಒಲೆ ಹಚ್ಚಿದ್ದೇವೆ. ಇದರಿಂದ ಅಡುಗೆ ತಯಾರಿಸಲು ಸಮಯ ಹೆಚ್ಚು ಬೇಕಾಗುತ್ತದೆ ಮತ್ತು ಹೊಗೆಯ ಕಾಟವೂ ಇದೆ. ಆದರೂ ಉದ್ಯಮ ಉಳಿಸಿಕೊಳ್ಳಲು ಇದು ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಮಾಲೀಕರು. ಇತ್ತ ಸೌದೆ ಒಲೆಯ ಅಡುಗೆಗೆ ಒಂದು ವಿಶಿಷ್ಟ ರುಚಿ ಇರುವುದರಿಂದ ಕೆಲವು ಗ್ರಾಹಕರು ಖುಷಿಪಟ್ಟರೆ, ಮೆನುವಿನಲ್ಲಿನ ಕಡಿತದಿಂದ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.





