2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವಕ್ಕೆ ಈಗಲೇ ಕೊನೆ ಬರಲಿದೆ ಎಂಬ ಸುಳಿವುಗಳು ಕೇಳಿಬರುತ್ತಿವೆ. ಬಿಸಿಸಿಐ ಈಗಾಗಲೇ ಮುಂದಿನ ಟಿ20 ಸರಣಿಗಳಲ್ಲಿ ಹೊಸ ನಾಯಕನನ್ನು ಪ್ರಯೋಗಿಸಲು ಚಿಂತನೆ ನಡೆಸುತ್ತಿದೆ. ಸೂರ್ಯಕುಮಾರ್ ಯಾದವ್ ವಯಸ್ಸು 35 ದಾಟಿರುವುದರಿಂದ 2028ರ ಟಿ20 ವಿಶ್ವಕಪ್‌ಗೆ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶುಭ್ಮನ್ ಗಿಲ್ ಅಥವಾ ಹಾರ್ದಿಕ್ ಪಾಂಡ್ಯ ಅವರಲ್ಲಿ ಒಬ್ಬರಿಗೆ ಟಿ20 ತಂಡದ ನಾಯಕತ್ವ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಸೂರ್ಯಕುಮಾರ್ ಯಾದವ್‌ಗೆ ಏನಾಗಿದೆ?
ಬಿಸಿಸಿಐ 2026ರ ಟಿ20 ವಿಶ್ವಕಪ್‌ಗಾಗಿ ಮಾತ್ರ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನನ್ನಾಗಿ ನೇಮಿಸಿತ್ತು. ಈಗ ಅವರ ವಯಸ್ಸು 35 ಆಗಿರುವುದರಿಂದ ಮುಂದಿನ ಟಿ20 ವಿಶ್ವಕಪ್‌ನಲ್ಲಿ (2028) ಅವರು ಆಡುವುದಿಲ್ಲ ಎಂಬ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ರೋಹಿತ್ ಶರ್ಮಾ ಅವರನ್ನು 2024ರ ವಿಶ್ವಕಪ್ ಗೆಲುವಿನ ನಂತರ ಟಿ20 ಕ್ಯಾಪ್ಟನ್ ಪದವಿಯಿಂದ ಕೆಳಗಿಳಿಸಲಾಗಿತ್ತು. ಅದೇ ರೀತಿ ಸೂರ್ಯಕುಮಾರ್ ಯಾದವ್ ಅವರಿಗೂ ಈಗಲೇ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೂ ಅವರು ಮುಂದಿನ ಕೆಲವು ಸರಣಿಗಳಲ್ಲಿ ಆಡುವ ಸಾಧ್ಯತೆ ಇದೆ.
ಹೊಸ ನಾಯಕ ಯಾರು?
ಬಿಸಿಸಿಐ ಈಗ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಅವರನ್ನು ಟಿ20 ತಂಡಕ್ಕೂ ನಾಯಕನನ್ನಾಗಿ ಮಾಡುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ. ಆದರೆ ಗಿಲ್ ಅವರು ಇತ್ತೀಚಿನ ಟಿ20 ಸರಣಿಗಳಲ್ಲಿ ತಂಡದಲ್ಲಿ ಇರಲಿಲ್ಲ. ಅವರಿಗೆ ಟಿ20 ತಂಡಕ್ಕೆ ಕಂಬ್ಯಾಕ್ ಮಾಡಲು ಈ ಬಾರಿಯ ಐಪಿಎಲ್ ಅತ್ಯಂತ ಮಹತ್ವದ್ದಾಗಿದೆ. ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಶುಭ್ಮನ್ ಗಿಲ್ ಟಿ20 ತಂಡದ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚು.
ಇಲ್ಲದಿದ್ದರೆ ಹಾರ್ದಿಕ್ ಪಾಂಡ್ಯ ಅವರಿಗೆ ಮತ್ತೊಮ್ಮೆ ಟಿ20 ಕ್ಯಾಪ್ಟನ್ ಪಟ್ಟ ನೀಡುವ ಸಾಧ್ಯತೆ ಇದೆ.
ಬಿಸಿಸಿಐಯ ದೀರ್ಘಾವಧಿಯ ಯೋಜನೆ :
2028ರ ಟಿ20 ವಿಶ್ವಕಪ್‌ಗೆ ಈಗಲೇ ಸ್ಥಿರ ನಾಯಕನನ್ನು ರೂಪಿಸುವ ಗುರಿಯೊಂದಿಗೆ ಬಿಸಿಸಿಐ ಕೆಲಸ ಮಾಡುತ್ತಿದೆ. ಮೂರು ಸ್ವರೂಪಗಳ ತಂಡಕ್ಕೂ ಒಬ್ಬೇ ನಾಯಕ ಇರಬೇಕೆಂಬ ಆಶಯವನ್ನು ಬಿಸಿಸಿಐ ಹೊಂದಿದೆ. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಉತ್ತರಾಧಿಕಾರಿಯಾಗಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಈ ಬಾರಿಯ ಐಪಿಎಲ್ ಮುಗಿಯುವವರೆಗೆ ಕಾದು ನೋಡಬೇಕಾಗಿದೆ.





