ಅಹಮದಾಬಾದ್: ಕ್ರಿಕೆಟ್ ಲೋಕದ ಹಬ್ಬ 2026ರ ಟಿ20 ವಿಶ್ವಕಪ್ ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಮತ್ತು ಬಲಿಷ್ಠ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತವು ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ತವಕದಲ್ಲಿದ್ದರೆ, ಕಿವೀಸ್ ಪಡೆ ಚೊಚ್ಚಲ ಟಿ20 ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಇತಿಹಾಸ ಸೃಷ್ಟಿಸಲು ಸಜ್ಜಾದ ಭಾರತ
ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಧೂಳೀಪಟ ಮಾಡಿದ ಭಾರತ, ಇತಿಹಾಸದಲ್ಲಿ ಸತತವಾಗಿ ಎರಡು ಬಾರಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ವಿಶ್ವದ ಮೂರನೇ ತಂಡ (ಪಾಕಿಸ್ತಾನ ಮತ್ತು ಶ್ರೀಲಂಕಾ ನಂತರ) ಎಂಬ ದಾಖಲೆ ಬರೆದಿದೆ. ಆದರೆ, ಫೈನಲ್‌ನಲ್ಲಿ ನ್ಯೂಜಿಲೆಂಡ್ ಇದೆ. ಹೀಗಾಹಿ ಇದು ಸುಲಭದ ಪಂದ್ಯವಲ್ಲ. ಐಸಿಸಿ ಟೂರ್ನಿಗಳಲ್ಲಿ ಭಾರತದ ಪಾಲಿಗೆ ನ್ಯೂಜಿಲೆಂಡ್ ಯಾವಾಗಲೂ ಕಂಟಕವಾಗಿಯೇ ಉಳಿದಿದೆ. ಅದರಲ್ಲೂ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಈವರೆಗೆ ನ್ಯೂಜಿಲೆಂಡ್ ವಿರುದ್ಧ ಒಂದೂ ಪಂದ್ಯ ಗೆದ್ದಿಲ್ಲ ಎಂಬುದು ಆತಂಕಕಾರಿ ಸಂಗತಿ.
ಮಳೆ ಬಂದರೆ ನಿಯಮಗಳೇನು?
ಅಹಮದಾಬಾದ್‌ನಲ್ಲಿ ಒಂದು ವೇಳೆ ಮಳೆರಾಯ ಪಂದ್ಯಕ್ಕೆ ಅಡ್ಡಿಪಡಿಸಿದರೆ ಪಂದ್ಯದ ಫಲಿತಾಂಶ ಹೇಗೆ ನಿರ್ಧಾರವಾಗುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಐಸಿಸಿ ರೂಪಿಸಿರುವ ನಿಯಮಗಳು ಈ ಕೆಳಗಿನಂತಿವೆ:
1. ನಿಗದಿತ ದಿನದ ಪ್ರಯತ್ನ: ಮಳೆಯ ಕಾರಣ ಪಂದ್ಯ ವಿಳಂಬವಾದರೆ, ಓವರ್‌ಗಳನ್ನು ಕಡಿತಗೊಳಿಸಿಯಾದರೂ (ಕನಿಷ್ಠ 10 ಓವರ್‌ಗಳ ಪಂದ್ಯ) ಭಾನುವಾರವೇ ಪಂದ್ಯ ಮುಗಿಸಲು ಆಯೋಜಕರು ಮೊದಲ ಆದ್ಯತೆ ನೀಡುತ್ತಾರೆ.
2. ಮೀಸಲು ದಿನ (Reserve Day): ಒಂದು ವೇಳೆ ಭಾನುವಾರ ಪಂದ್ಯ ಸಾಧ್ಯವಾಗದಿದ್ದರೆ ಅಥವಾ ಅರ್ಧಕ್ಕೆ ನಿಂತರೆ, ಸೋಮವಾರವನ್ನು ಮೀಸಲು ದಿನವಾಗಿ ಇರಿಸಲಾಗಿದೆ. ಪಂದ್ಯವು ಮೊದಲಿನಿಂದ ಆರಂಭವಾಗದೆ, ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಮುಂದುವರಿಯಲಿದೆ.
3. ಜಂಟಿ ವಿಜೇತರು: ಮಳೆ ಎಷ್ಟು ಭೀಕರವಾಗಿದ್ದು, ಮೀಸಲು ದಿನದಂದೂ ಕನಿಷ್ಠ 10 ಓವರ್‌ಗಳ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ನಿಯಮದಂತೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿ ಪ್ರಶಸ್ತಿಯನ್ನು ಹಂಚಲಾಗುತ್ತದೆ.
ಸೂಪರ್ ಓವರ್‌ನಲ್ಲಿ ಬದಲಾದ ನಿಯಮ
ಒಂದು ವೇಳೆ ಪಂದ್ಯವು ಟೈ ಆದರೆ ‘ಸೂಪರ್ ಓವರ್’ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವು ‘ಬೌಂಡರಿ ಕೌಂಟ್’ ನಿಯಮದಿಂದಾಗಿ ಅನ್ಯಾಯವಾಗಿ ಸೋತಿತ್ತು. ಆ ವಿವಾದದ ನಂತರ ಐಸಿಸಿ ನಿಯಮ ಬದಲಿಸಿದೆ.
ಈಗಿನ ನಿಯಮದಂತೆ, ಸೂಪರ್ ಓವರ್ ಕೂಡ ಟೈ ಆದರೆ, ಫಲಿತಾಂಶ ಬರುವವರೆಗೆ ಸತತವಾಗಿ ಸೂಪರ್ ಓವರ್‌ಗಳನ್ನು ಆಡಿಸಲಾಗುತ್ತದೆ. ಬೌಂಡರಿಗಳ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡುವ ಪದ್ಧತಿಯನ್ನು ಈಗ ಸಂಪೂರ್ಣವಾಗಿ ಕೈಬಿಡಲಾಗಿದೆ.
ಲಕ್ಷಾಂತರ ಅಭಿಮಾನಿಗಳು ಮಳೆ ಬಾರದಿರಲಿ, ಕ್ರೀಡಾಂಗಣದಲ್ಲಿಯೇ ಟೀಮ್ ಇಂಡಿಯಾ ಕಿವೀಸ್ ಪಡೆಯನ್ನು ಮಣಿಸಿ ವಿಶ್ವವಿಜೇತರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.





