ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಘನತ್ಯಾಜ್ಯ ಸಮಸ್ಯೆಗೆ ಸಮಗ್ರ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದೆ. ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಅಂಗವಾಗಿ ನಾಗರಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಮೂವರು ಗಣ್ಯರನ್ನು ಶುಚಿತ್ವ ರಾಯಭಾರಿಗಳಾಗಿ ನೇಮಕ ಮಾಡಲಾಗಿದೆ. ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿ, ಚಲನಚಿತ್ರ ನಟ ಅನಿರುದ್ಧ ಜಟ್ಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಅರುಣ್ ಪೈ ಅವರನ್ನು ಅಧಿಕೃತವಾಗಿ ರಾಯಭಾರಿಗಳನ್ನಾಗಿ ಘೋಷಿಸಲಾಗಿದೆ.
ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಅಂಗವಾಗಿ ನಾಗರಿಕರಲ್ಲಿ ಕಸ ವಿಂಗಡಣೆ, ಪ್ಲಾಸ್ಟಿಕ್ ಕಡಿತ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ 9ರಂದು ಟೌನ್ ಹಾಲ್‌ನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಈ ರಾಯಭಾರಿಗಳಿಗೆ ಅಧಿಕೃತವಾಗಿ ಜವಾಬ್ದಾರಿ ನೀಡಲಾಗುತ್ತದೆ. ಇವರ ಮೂಲಕ ನಗರಾದ್ಯಂತ ಜಾಗೃತಿ ಕಾರ್ಯಕ್ರಮಗಳು, ಸಾರ್ವಜನಿಕ ಸಂವಾದಗಳು ಹಾಗೂ ಶಾಲಾ-ಕಾಲೇಜು ಮಟ್ಟದಲ್ಲಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಪ್ಲಾಸ್ಟಿಕ್ ಸಂಗ್ರಹದಲ್ಲಿ ಮಹತ್ವದ ಸಾಧನೆ
ನಗರದಲ್ಲಿ ಪ್ರತಿದಿನ ಸರಾಸರಿ 6,000 ಮೆಟ್ರಿಕ್ ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ ಸುಮಾರು 520 ಮೆಟ್ರಿಕ್ ಟನ್ ಕಡಿಮೆ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಈ ಪ್ರಮಾಣವನ್ನು 1,000 ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಕಸ ವಿಂಗಡಣೆ ಮಾಡುವ ಅಭ್ಯಾಸ ಹೆಚ್ಚುತ್ತಿರುವುದರಿಂದ ಪ್ಲಾಸ್ಟಿಕ್ ಸಂಗ್ರಹದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.
ನಿಯಮ ಉಲ್ಲಂಘನೆಗೆ ಭಾರೀ ದಂಡ
ರಸ್ತೆಬದಿ ಕಸ ಬಿಸಾಡುವುದು, ವಿಂಗಡಿಸದೆ ತ್ಯಾಜ್ಯ ನೀಡುವುದು ಸೇರಿದಂತೆ ನಿಯಮ ಉಲ್ಲಂಘನೆ ಮಾಡುವವರಿಂದ ಪ್ರತಿ ತಿಂಗಳು ಸರಾಸರಿ 60 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗುತ್ತಿದೆ. ಈ ದಂಡದ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಒಂದು ಟ್ರ್ಯಾಕ್ಟರ್ ಖರೀದಿಸಲಾಗಿದೆ.
ಈ ಟ್ರ್ಯಾಕ್ಟರ್‌ಗಳ ಮೂಲಕ ಬಲ್ಕ್ ವೇಸ್ಟ್ ತೆರವು ಕಾರ್ಯ ಚುರುಕುಗೊಂಡಿದ್ದು, ಕಳೆದ ಮೂರು ತಿಂಗಳಲ್ಲಿ 6,000 ಮೆಟ್ರಿಕ್ ಟನ್‌ಗಿಂತ ಹೆಚ್ಚು ಬಲ್ಕ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ.
ಸಮಗ್ರ ತ್ಯಾಜ್ಯ ನಿರ್ವಹಣೆಗೆ 100 ಎಕರೆ ಜಾಗ
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಳ ಹೋಬಳಿಯ ಗುಂಡಲಹಳ್ಳಿ ಟೆರ್ರಾ ಫಾರ್ಮ್ ಪ್ರದೇಶ ಹಾಗೂ ಬೆಂಗಳೂರು ದಕ್ಷಿಣ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಸರ್ಕಾರಿ ಜಾಗ ಸೇರಿದಂತೆ 100 ಎಕರೆಗೂ ಹೆಚ್ಚು ಜಾಗವನ್ನು ಸಮಗ್ರ ಘನತ್ಯಾಜ್ಯ ನಿರ್ವಹಣಾ ಯೋಜನೆಗಾಗಿ ಗುರುತಿಸಲಾಗಿದೆ. ಸರ್ಕಾರದಿಂದ ಭೂ ಪರಿಹಾರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಗಳು ಆರಂಭಗೊಳ್ಳಲಿವೆ.
ಕಸ ಸಮಸ್ಯೆಗೆ ತಕ್ಷಣ ದೂರು ನೀಡಲು ವ್ಯವಸ್ಥೆ
ನಗರದ ಯಾವುದೇ ಭಾಗದಲ್ಲಿ ಕಸದ ಸಮಸ್ಯೆ ಕಂಡುಬಂದರೆ ‘ಸಹಾಯ 2.0’ ತಂತ್ರಾಂಶ, ಜಿಬಿಎ ಸಹಾಯವಾಣಿ ಸಂಖ್ಯೆ 1533 ಅಥವಾ ವಾಟ್ಸಪ್ ಚಾಟ್‌ಬಾಟ್ 9448197197 ಮೂಲಕ ದೂರು ನೀಡಬಹುದು. ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ದೂರುಗಳನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಗುತ್ತದೆ.





