ಸಿಲಿಕಾನ್ ಸಿಟಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪಾನಮತ್ತ ಚಾಲನೆ ಪ್ರಕರಣಗಳನ್ನು ತಡೆಗಟ್ಟಲು ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ಫಲವಾಗಿ ಸಾವಿರಾರು ಚಾಲನಾ ಪರವಾನಗಿಗಳು (ಡಿಎಲ್) ತಾತ್ಕಾಲಿಕವಾಗಿ ಅಮಾನತುಗೊಂಡಿವೆ.
2024ರಲ್ಲಿ ನಗರದಲ್ಲಿ 23,620 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ ಈ ಸಂಖ್ಯೆ ಭಾರೀ ಏರಿಕೆಯಾಗಿದ್ದು 38,919 ಪ್ರಕರಣಗಳವರೆಗೆ ತಲುಪಿದೆ. ಈ ಪ್ರಕರಣಗಳ ಹಿನ್ನೆಲೆಯಲ್ಲಿ ಒಟ್ಟು 19,500 ಚಾಲನಾ ಪರವಾನಗಿಗಳನ್ನು ಅಮಾನತು ಮಾಡುವಂತೆ ಸಂಬಂಧಪಟ್ಟ ಆರ್ಟಿಒ ಕಚೇರಿಗಳಿಗೆ ಶಿಫಾರಸು ಮಾಡಲಾಗಿತ್ತು. ಇದರಲ್ಲಿ ಈಗಾಗಲೇ 17 ಸಾವಿರಕ್ಕೂ ಹೆಚ್ಚು ಡಿಎಲ್ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರದ 50 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ತಪಾಸಣೆ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತಗಳನ್ನು ತಡೆಯುವ ಉದ್ದೇಶದಿಂದ 13 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಪರಿಶೀಲಿಸಲಾಗಿದೆ. ತಪಾಸಣೆ ವೇಳೆ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು, ಕಾರು ಚಾಲಕರು, ಶಾಲಾ ವಾಹನ ಚಾಲಕರು, ಖಾಸಗಿ ಬಸ್ ಚಾಲಕರು ಹಾಗೂ ವಾಟರ್ ಟ್ಯಾಂಕರ್ ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವುದು ಪತ್ತೆಯಾಗಿದೆ.
ಪಾನಮತ್ತ ಚಾಲಕರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ. ಮೊದಲ ಬಾರಿಗೆ ಸಿಕ್ಕಿಬಿದ್ದರೆ ಮೂರು ತಿಂಗಳವರೆಗೆ ಚಾಲನಾ ಪರವಾನಗಿ ಅಮಾನತು ಮಾಡಲಾಗುತ್ತದೆ. ಎರಡನೇ ಬಾರಿಗೆ ತಪ್ಪಿತಸ್ಥರಾಗಿದ್ರೆ ಆರು ತಿಂಗಳವರೆಗೆ ಡಿಎಲ್ ಅಮಾನತು ಮಾಡಲಾಗುತ್ತದೆ. ಇದರ ಜೊತೆಗೆ ಸಂಬಂಧಿಸಿದ ವಾಹನವನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ.
ಇತ್ತೀಚೆಗೆ ಮೂರು ಸಾವಿರಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆಗೊಳಪಡಿಸಿದ ವೇಳೆ 23 ಮಂದಿ ಚಾಲಕರು ಮದ್ಯಪಾನ ಸ್ಥಿತಿಯಲ್ಲಿ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿದೆ. ಅವರ ವಿರುದ್ಧ ಪಾನಮತ್ತ ಚಾಲನೆ ಮತ್ತು ಅಜಾಗರೂಕ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ತಪಾಸಣೆ ಸಂದರ್ಭದಲ್ಲಿ ಫಿಟ್ನೆಸ್ ಪ್ರಮಾಣಪತ್ರ (ಎಫ್.ಸಿ) ಇಲ್ಲದ ವಾಹನಗಳನ್ನೂ ಪತ್ತೆಹಚ್ಚಲಾಗಿದೆ. ಇಂತಹ ವಾಹನಗಳನ್ನು ಜಪ್ತಿ ಮಾಡಿ ಆರ್ಟಿಒ ಕಚೇರಿಗಳಿಗೆ ಒಪ್ಪಿಸಲಾಗಿದೆ. ಇದು ವಾಹನಗಳ ತಾಂತ್ರಿಕ ದೋಷಗಳಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ಸಹಾಯಕವಾಗಿದೆ.
ಕೆಲ ಶಾಲಾ ವಾಹನ ಚಾಲಕರು ಪಾನಮತ್ತ ಸ್ಥಿತಿಯಲ್ಲಿ ವಾಹನ ಚಾಲನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಶಾಲಾ ಮಂಡಳಿಗಳಿಗೆ ನೋಟಿಸ್ ನೀಡಲಾಗಿದ್ದು, ಅವರ ಸ್ಪಷ್ಟೀಕರಣವನ್ನು ಆಧರಿಸಿ ಸಾರಿಗೆ ಇಲಾಖೆಗೆ ವರದಿ ಸಲ್ಲಿಸಲಾಗುತ್ತದೆ.
ಇನ್ನೂ ಕೆಲವು ಶಾಲೆಗಳು ಮಕ್ಕಳನ್ನು ಕರೆದೊಯ್ಯಲು ಖಾಸಗಿ ವಾಹನಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ. ಈ ಕ್ರಮವು ಸುರಕ್ಷತಾ ನಿಯಮಗಳಿಗೆ ವಿರುದ್ಧವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮಕ್ಕಳ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.





