ಬೆಂಗಳೂರು/ಚಾಮರಾಜನಗರ: ರಾಜ್ಯದ ಪ್ರಮುಖ ವನ್ಯಜೀವಿ ಅಭಯಾರಣ್ಯಗಳಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳಲ್ಲಿ ನಾಳೆ (ಫೆಬ್ರವರಿ 19) ರಿಂದ ಸಫಾರಿ ಸೇವೆಗಳನ್ನು ಹಂತ ಹಂತವಾಗಿ ಪುನರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಈ ಪ್ರದೇಶಗಳಲ್ಲಿ ಹುಲಿ ದಾಳಿಯಿಂದ ಹಲವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಮಾನವ ಜೀವಕ್ಕೆ ಆದ್ಯತೆ ನೀಡಿ ನವೆಂಬರ್ 7ರಿಂದ ಸಫಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ತಾಂತ್ರಿಕ ಸಮಿತಿಯ ಮಧ್ಯಂತರ ವರದಿ ಆಧರಿಸಿ, ಕೇವಲ 50% ವಾಹನ ಬಳಕೆಯೊಂದಿಗೆ ಸಫಾರಿ ಪುನರಾರಂಭಿಸಲು ನಿರ್ಧರಿಸಲಾಗಿದೆ.
ಸಫಾರಿ ಸಮಯದಲ್ಲಿ ಬದಲಾವಣೆ
ಸುರಕ್ಷತೆ ದೃಷ್ಟಿಯಿಂದ ಸಫಾರಿ ಸಮಯವನ್ನು 8 ಗಂಟೆಯಿಂದ 5 ಗಂಟೆಗೆ ಇಳಿಸಲಾಗಿದೆ. ಬಂಡೀಪುರದಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಅವಕಾಶ ಇರಲಿದೆ. ಸುಂಕದಕಟ್ಟೆ ವಲಯದಲ್ಲಿ 6 ಗಂಟೆ ಮತ್ತು ನಾಗರಹೊಳೆಯಲ್ಲಿ ಪ್ರಥಮ ಹಂತದಲ್ಲಿ 4 ಗಂಟೆಗಳ ಕಾಲ ಮಾತ್ರ ಸಫಾರಿಗೆ ಅನುಮತಿ ನೀಡಲಾಗಿದೆ.
ಇದಕ್ಕೂ ಮೊದಲು ಕಾರ್ಯನಿರ್ವಹಿಸುತ್ತಿದ್ದ ವಾಹನಗಳ ಕೇವಲ ಅರ್ಧ ಸಂಖ್ಯೆಯನ್ನು ಮಾತ್ರ ಬಳಕೆ ಮಾಡಲು ಸೂಚಿಸಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ, ಸಂಪೂರ್ಣ ವರದಿ ಬಂದ ನಂತರ 100% ಸಫಾರಿ ಅನುಮತಿ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಮಾನವ–ಪ್ರಾಣಿ ಸಂಘರ್ಷ ತಡೆಗೆ ಕ್ರಮ
ಸಚಿವರ ಪ್ರಕಾರ, ಪ್ರತಿವರ್ಷ 45-50 ಮಂದಿ ಮಾನವ–ಪ್ರಾಣಿ ಸಂಘರ್ಷದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ಈಗಾಗಲೇ 28 ಹುಲಿಗಳನ್ನು ನಾಡಿನಿಂದ ಹಿಡಿದು ಕಾಡಿಗೆ ಬಿಡಲಾಗಿದೆ. ಸಫಾರಿ ವಾಹನಗಳಿಗೆ ಜಿಪಿಎಸ್ ಮತ್ತು ಡ್ಯಾಶ್‌ಕ್ಯಾಮ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ವನ್ಯಜೀವಿಗಳಿಂದ ಹಾನಿಗೊಳಗಾದವರಿಗೆ ಇಲಾಖೆ ಸಂಪೂರ್ಣ ನೆರವು ನೀಡುತ್ತಿದೆ. ಸಾವನ್ನಪ್ಪಿದ ಸಿಬ್ಬಂದಿಗೆ 30 ರಿಂದ 50 ಲಕ್ಷ ರೂ.ವರೆಗೆ ಪರಿಹಾರ, ಸಾರ್ವಜನಿಕರಿಗೆ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಸಫಾರಿ ಆದಾಯ ಮತ್ತು ನಿರ್ಬಂಧಗಳು
ಸಫಾರಿಯಿಂದ ವರ್ಷಕ್ಕೆ ಸುಮಾರು 20 ಕೋಟಿ ರೂ. ಆದಾಯ ಬರುತ್ತಿದೆ. ಆದರೆ ಸದ್ಯಕ್ಕೆ ಸುತ್ತಮುತ್ತಲಿನ ರೆಸಾರ್ಟ್‌ಗಳು, ಹೋಮ್‌ಸ್ಟೇಗಳು ಮತ್ತು ಕ್ಯಾಂಪ್‌ಫೈರ್ ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರಿದಿದೆ. ಈ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.
ರೈತರಿಗೆ ಪರಿಹಾರ, ಗ್ರಾಮಗಳಿಗೆ ಅಭಿವೃದ್ಧಿ
ವನ್ಯಜೀವಿಗಳ ದಾಳಿಯಿಂದ ಬೆಳೆ ನಾಶವಾದ ರೈತರಿಗೆ ಇದುವರೆಗೆ 50-60 ಕೋಟಿ ರೂ. ಪರಿಹಾರ ನೀಡಲಾಗಿದೆ. ತಕ್ಷಣ ಪರಿಹಾರ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಕಾಡಂಚಿನ ಗ್ರಾಮಗಳಿಗೆ ರಾತ್ರಿ ವೇಳೆ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸಲು ಸೂಚನೆ ನೀಡಲಾಗಿದೆ. ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅರಣ್ಯ ಒತ್ತುವರಿ ತೆರವು ಮತ್ತು ಪುನರ್ವಸತಿ
ಸುಮಾರು 2.15 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿದ್ದು, ಈಗಾಗಲೇ 7 ಸಾವಿರ ಎಕರೆ ತೆರವು ಮಾಡಲಾಗಿದೆ. ಅರಣ್ಯದ ಒಳಗೆ ವಾಸಿಸುವ ಕುಟುಂಬಗಳನ್ನು ಸ್ಥಳಾಂತರಿಸಲು 500 ಕೋಟಿ ರೂ. ಅನುದಾನ ಬೇಡಿಕೆ ಸಲ್ಲಿಸಲಾಗಿದೆ.
ಅರಣ್ಯ ಇಲಾಖೆಗೆ ಒಟ್ಟು ಬಜೆಟ್‌ನ 1% ಅನುದಾನ, ಅಂದರೆ ಸುಮಾರು 4,500 ಕೋಟಿ ರೂ. ನೀಡುವಂತೆ ಮನವಿ ಮಾಡಲಾಗಿದೆ.





