ವಿಜಯಪುರ: ಪತಿಯೇ ಪತ್ನಿಯನ್ನು ಕೊಲೆ ಮಾಡಿ ಆಕೆಯ ಶವವನ್ನ ಮನೆಯೊಳಗೆ ಹೂತುಹಾಕಿದ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಈ ಕೃತ್ಯ ನಡೆದು 24 ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಪೊಲೀಸರು ಶವವನ್ನು ಹೊರತೆಗೆದು ತನಿಖೆ ಕೈಗೊಂಡಿದ್ದಾರೆ. ಸಾಲದ ವಿಚಾರವಾಗಿ ನಡೆದ ಜಗಳವೇ ಈ ದಾರುಣ ಘಟನೆಗೆ ಕಾರಣವಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹತ್ಯೆಯಾದ 45 ವರ್ಷದ ಸರೋಜಿನಿ ರತ್ನಾಕರ್. ಆರೋಪಿ ಅವರ ಪತಿ 46 ವರ್ಷದ ಪ್ರಭು ರತ್ನಾಕರ್. ದಂಪತಿಯ ಮಧ್ಯೆ ಹಲವು ದಿನಗಳಿಂದ ಹಣದ ವಿಚಾರವಾಗಿ ಮನಸ್ತಾಪ ಉಂಟಾಗುತ್ತಿತ್ತು ಎನ್ನಲಾಗಿದೆ. ಸರೋಜಿನಿ ಹೆಸರಿನಲ್ಲಿ ಪ್ರಭು ಸಾಲ ಮಾಡಿಕೊಂಡಿದ್ದ ವಿಚಾರವೇ ದಂಪತಿಯ ನಡುವೆ ಪದೇ ಪದೇ ಜಗಳಕ್ಕೆ ಕಾರಣವಾಗುತ್ತಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.
ಕಳೆದ ಜನವರಿ 23ರ ರಾತ್ರಿ ಸಾಲದ ವಿಚಾರವಾಗಿ ದಂಪತಿಯ ನಡುವೆ ಭಾರೀ ಜಗಳ ನಡೆದಿದೆ. ಜನವರಿ 24ರ ಬೆಳಗಿನ ಜಾವ ಪ್ರಭು ರತ್ನಾಕರ್ ಕೋಪದಲ್ಲಿ ಪತ್ನಿಯ ತಲೆಗೆ ಕಬ್ಬಿಣದ ಹಾರಿಯಿಂದ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಸರೋಜಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ನಂತರ ಪತ್ನಿ ಮೃತಪಟ್ಟಿರುವ ವಿಷಯ ಬಯಲಾಗಬಾರದು ಎಂಬ ಉದ್ದೇಶದಿಂದ ಶವವನ್ನು ಮನೆಯಲ್ಲೇ ಹೂತುಹಾಕಿದ್ದಾನೆ. ನಂತರ ಯಾವುದೇ ಅನುಮಾನ ಮೂಡದಂತೆ ತನ್ನ ದೈನಂದಿನ ಚಟುವಟಿಕೆಗಳನ್ನು ಮುಂದುವರೆಸಿದ್ದಾನೆ.
ಸರೋಜಿನಿ ಕಾಣೆಯಾಗಿರುವುದರಿಂದ ಅನುಮಾನಗೊಂಡ ಅವರ ತಾಯಿ ಕಮಲವ್ವ, ಮೇಲಿನ ಮನೆಯಿಂದ ಅಳಿಯ ಪ್ರಭು ವಿರುದ್ಧ ದೂರು ದಾಖಲಿಸಿದ್ದಾರೆ. ಮಗಳ ಸುಳಿವು ಸಿಗದೆ ಆತಂಕಗೊಂಡ ಅವರು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ದೇವರಹಿಪ್ಪರಗಿ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದರು. ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯ ಹೊರಬಂದಿದೆ. ಬಳಿಕ ಮನೆ ಆವರಣದಲ್ಲಿ ಶವವನ್ನು ಹೊರತೆಗೆದು ಪರೀಶೀಲನೆಗೆ ಕಳುಹಿಸಲಾಗಿದೆ. ಆರೋಪಿ ಪ್ರಭು ರತ್ನಾಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮುಂದುವರಿದಿದೆ.





