ಇತ್ತೀಚಿನ ವೈದ್ಯಕೀಯ ವರದಿಗಳ ಪ್ರಕಾರ, ಥೈರಾಯ್ಡ್ ಕ್ಯಾನ್ಸರ್ (Thyroid Cancer) ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. ವಿಶೇಷವಾಗಿ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಮೂರು ಪಟ್ಟು ಹೆಚ್ಚಿದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದ್ದರೂ, ಅನೇಕರು ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಮಹಿಳೆಯರಲ್ಲೇ ಈ ಅಪಾಯ ಏಕೆ ಹೆಚ್ಚು?
ಥೈರಾಯ್ಡ್ ಕ್ಯಾನ್ಸರ್ಗೆ ಹಾರ್ಮೋನುಗಳ ಅಸಮತೋಲನವೇ ಪ್ರಮುಖ ಕಾರಣ ಎನ್ನಲಾಗಿದೆ. ಮಹಿಳೆಯರಲ್ಲಿನ ಈಸ್ಟೋಜೆನ್ (Estrogen) ಹಾರ್ಮೋನುಗಳು ಥೈರಾಯ್ಡ್ ಕೋಶಗಳ ಅಸಹಜ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತವೆ.
ಈ ಸಾಮಾನ್ಯ ಲಕ್ಷಣಗಳ ಬಗ್ಗೆ ನಿಗಾ ಇರಲಿ
ಥೈರಾಯ್ಡ್ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ, ಹಾಗಾಗಿ ಇವುಗಳನ್ನು ಸಾಮಾನ್ಯ ಕುತ್ತಿಗೆ ನೋವು ಅಥವಾ ಗಂಟಲು ನೋವು ಎಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇರುತ್ತದೆ. ಈ ಕೆಳಗಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ:
-
ನೋವುರಹಿತ ಗಡ್ಡೆ: ಕುತ್ತಿಗೆಯ ಮುಂಭಾಗದಲ್ಲಿ ಸಣ್ಣ ಗಡ್ಡೆ ಅಥವಾ ಊತ ಕಾಣಿಸಿಕೊಳ್ಳುವುದು. ಇದು ಸಾಮಾನ್ಯವಾಗಿ ನೋವು ನೀಡುವುದಿಲ್ಲ, ಹಾಗಾಗಿ ಅಪಾಯಕಾರಿ ಎಂದು ಯಾರಿಗೂ ಅನಿಸುವುದಿಲ್ಲ.
-
ಧ್ವನಿಯಲ್ಲಿ ಬದಲಾವಣೆ: ನಿಮ್ಮ ಧ್ವನಿ ಇದ್ದಕ್ಕಿದ್ದಂತೆ ಕರ್ಕಶವಾಗುವುದು ಅಥವಾ ಧ್ವನಿಯಲ್ಲಿ ನಿರಂತರ ಬದಲಾವಣೆ ಕಂಡುಬರುವುದು.
-
ನುಂಗಲು ತೊಂದರೆ: ಆಹಾರ ಅಥವಾ ನೀರನ್ನು ನುಂಗುವಾಗ ಗಂಟಲಿನಲ್ಲಿ ಏನೋ ಅಡಚಣೆಯಾದಂತೆ ಭಾಸವಾಗುವುದು.
-
ಬಿಗಿತದ ಭಾವನೆ: ಕುತ್ತಿಗೆಯ ಸುತ್ತ ಒತ್ತಡ ಅಥವಾ ಬಿಗಿತ ಅನುಭವಕ್ಕೆ ಬರುವುದು.
-
ನಿರಂತರ ಕೆಮ್ಮು: ಯಾವುದೇ ಶೀತ ಅಥವಾ ಜ್ವರವಿಲ್ಲದಿದ್ದರೂ ದೀರ್ಘಕಾಲದವರೆಗೆ ಕೆಮ್ಮು ಇರುವುದು.
-
ದುಗ್ಧರಸ ಗ್ರಂಥಿಗಳ ಹಿಯಗ್ಗುವಿಕೆ: ಕುತ್ತಿಗೆಯ ಸೈಡ್ಗಳಲ್ಲಿರುವ ಗ್ರಂಥಿಗಳು ಊದಿಕೊಳ್ಳುವುದು.
ತಡೆಗಟ್ಟುವ ಕ್ರಮಗಳು
ಥೈರಾಯ್ಡ್ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ, ಕೆಲವು ಮುನ್ನೆಚ್ಚರಿಕೆಗಳ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು:
-
ವಿಕಿರಣದಿಂದ ದೂರವಿರಿ: ಅನಗತ್ಯವಾಗಿ ಕುತ್ತಿಗೆ ಭಾಗಕ್ಕೆ ಅತಿಯಾದ ಎಕ್ಸ್-ರೇ ಅಥವಾ ವಿಕಿರಣಗಳು ತಗುಲದಂತೆ ಜಾಗ್ರತೆ ವಹಿಸಿ.
-
ಆರೋಗ್ಯಕರ ಆಹಾರ: ಅಯೋಡಿನ್ ಯುಕ್ತ ಸಮತೋಲಿತ ಆಹಾರ ಮತ್ತು ಹಸಿರು ತರಕಾರಿಗಳ ಸೇವನೆ ಹೆಚ್ಚಿರಲಿ.
-
ನಿಯಮಿತ ತಪಾಸಣೆ: ನಿಮಗೆ ಈಗಾಗಲೇ ಹೈಪೋ ಅಥವಾ ಹೈಪರ್ ಥೈರಾಯ್ಡ್ ಸಮಸ್ಯೆ ಇದ್ದರೆ, ವರ್ಷಕ್ಕೊಮ್ಮೆಯಾದರೂ ಕ್ಯಾನ್ಸರ್ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಉತ್ತಮ.
ಥೈರಾಯ್ಡ್ ಕ್ಯಾನ್ಸರ್ ಮರಣಾಂತಿಕವಲ್ಲ, ಆದರೆ ಸಕಾಲಿಕ ಚಿಕಿತ್ಸೆ ಅತಿ ಮುಖ್ಯ. ನಿಮ್ಮ ದೇಹ ನೀಡುವ ಸಣ್ಣ ಬದಲಾವಣೆಗಳಿಗೂ ಕಿವಿಗೊಡಿ.





