ಬೀದರ್: ರಾಜ್ಯ ಸರ್ಕಾರ ಆಯೋಜಿಸಿದ್ದ ‘ಕಾಯಕ ಶರಣರ ಜಯಂತಿ’ ಸಮಾರಂಭಕ್ಕೆ ಸಂಬಂಧಿಸಿದ ಜಾಹೀರಾತು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತಿನಲ್ಲಿ ಉರಿಲಿಂಗಪೆದ್ದಿ ಶರಣರ ಭಾವಚಿತ್ರವನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಲಾಗಿದೆ ಎಂದು ಬೇಲೂರ ಮಠದ ಪೀಠಾಧ್ಯಕ್ಷರಾದ ಶ್ರೀ ಪಂಚಾಕ್ಷರಿ ಸ್ವಾಮೀಜಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಜಾಹೀರಾತಿನಲ್ಲಿ ಉರಿಲಿಂಗಪೆದ್ದಿ ಶರಣರನ್ನು “ಲಿಂಗದೀಕ್ಷಾ ಕಾರ್ಯವನ್ನು ಕದ್ದು ನೋಡುತ್ತಿರುವಂತೆ” ಚಿತ್ರಿಸಲಾಗಿದೆ ಎಂಬುದು ಸ್ವಾಮೀಜಿಗಳ ಆಕ್ಷೇಪವಾಗಿದೆ. ಶರಣರನ್ನು ಕಳ್ಳರ ರೀತಿಯಲ್ಲಿ ಬಿಂಬಿಸಿರುವುದು ಅತ್ಯಂತ ಅಸಹ್ಯಕರ ಮತ್ತು ಅವಮಾನಕಾರಿಯಾಗಿದೆ ಎಂದು ಶ್ರೀ ಪಂಚಾಕ್ಷರಿ ಸ್ವಾಮೀಜಿಗಳು ಹೇಳಿದ್ದಾರೆ.
ಉರಿಲಿಂಗಪೆದ್ದಿ ಶರಣರು ದಲಿತ ಸಮುದಾಯಕ್ಕೆ ಸೇರಿದ ಮಹಾನ್ ಶರಣರಾಗಿದ್ದು, ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಗೌರವಪೂರ್ವಕವಾಗಿ ಪ್ರತಿಬಿಂಬಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ಈ ಜಾಹೀರಾತಿನಲ್ಲಿ ಹೆಗಲ ಮೇಲೆ ಗಂಟು ಮೂಟೆ ಹೊತ್ತಿರುವ ಆಧಾರರಹಿತ ಚಿತ್ರವನ್ನು ಪ್ರಕಟಿಸಲಾಗಿದೆ. ಇದು ಶರಣರ ಐತಿಹಾಸಿಕ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
“ಉರಿಲಿಂಗಪೆದ್ದಿ ಶರಣರನ್ನು ಕಳ್ಳರಂತೆ ಬಿಂಬಿಸುವುದು ಸರಿಯೇ? ಅವರ ಬಗ್ಗೆ ಸರಿಯಾದ ಸಂಶೋಧನೆ ಇಲ್ಲದೇ ನಿಮ್ಮ ಇಚ್ಛೆಯಂತೆ ಚಿತ್ರ ಪ್ರಕಟಿಸಿದರೆ ನಾವು ಒಪ್ಪಬೇಕೇ?” ಎಂದು ಸ್ವಾಮೀಜಿಗಳು ಪ್ರಶ್ನಿಸಿದ್ದಾರೆ. ಉರಿಲಿಂಗಪೆದ್ದಿ ಶರಣರು 260ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಮಹಾನ್ ವಚನಕಾರರಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಅವರ ಹೆಸರಿನಲ್ಲಿ ನೂರಾರು ಮಠಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಮಹನೀಯರ ಭಾವಚಿತ್ರವನ್ನು ಬಳಸುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕಿತ್ತು ಎಂದುಪಂಚಾಕ್ಷರಿ ಸ್ವಾಮೀಜಿಗಳು ತಿಳಿಸಿದ್ದಾರೆ.
ಸರ್ಕಾರದ ಯಾವುದೇ ಇಲಾಖೆ ಇಂತಹ ಐತಿಹಾಸಿಕ ಹಾಗೂ ಧಾರ್ಮಿಕ ವ್ಯಕ್ತಿಗಳ ಬಗ್ಗೆ ಜಾಹೀರಾತು ಪ್ರಕಟಿಸುವ ಮುನ್ನ ಸಂಬಂಧಿತ ಮಠಾಧೀಶರು, ಸಂಶೋಧಕರು ಮತ್ತು ತಜ್ಞರ ಸಲಹೆ ಪಡೆಯಬೇಕು. ಮಾಹಿತಿ ಲಭ್ಯವಿಲ್ಲದಿದ್ದರೆ ಸಂಬಂಧಿತ ಮಠಗಳಿಂದ ಅಧಿಕೃತ ವಿವರಗಳನ್ನು ಕೇಳಿಕೊಳ್ಳಬಹುದಿತ್ತು. ಆದರೆ, ಈ ಕ್ರಮ ಅನುಸರಿಸದೇ ಜಾಹೀರಾತು ಪ್ರಕಟಿಸಲಾಗಿದೆ ಎಂದು ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ..
ಕಾಯಕ ಶರಣರ ಜಯಂತಿ ಎಂಬ ಪವಿತ್ರ ಸಂದರ್ಭದಲ್ಲೇ ಇಂತಹ ವಿವಾದ ಉಂಟಾಗಿರುವುದು ದುಃಖಕರ ಎಂದು ಸ್ವಾಮೀಜಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಇನ್ಮುಂದೆ ಉರಿಲಿಂಗಪೆದ್ದಿ ಶರಣರ ಭಾವಚಿತ್ರವನ್ನು ಬಳಸುವಾಗ ಸೂಕ್ತ ಸಂಶೋಧನೆ ನಡೆಸಿ, ಗೌರವಪೂರ್ವಕವಾಗಿ ಬಳಸಬೇಕು ಎಂದು ಸ್ವಾಮೀಜಿಗಳು ಮನವಿ ಮಾಡಿದ್ದಾರೆ. ಸಂಬಂಧಿತ ಜಾಹೀರಾತಿನ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿದ್ದರೆ ತಿದ್ದುಪಡಿ ಮಾಡಬೇಕೆಂದು ಅವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.





