ದೆಹಲಿಯಲ್ಲಿ ನಡೆದ ಸಿಬಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೈಬರ್ ಭದ್ರತೆಯು ಕೇವಲ ಆರ್ಥಿಕ ನಷ್ಟದ ವಿಷಯವಲ್ಲ, ಇದು ಭಾರತದ ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದ ಆನ್‌ಲೈನ್ ವಂಚನೆಗಳನ್ನು ಭೇದಿಸಲು ಮತ್ತು ಸಂಕೀರ್ಣವಾದ ಡಿಜಿಟಲ್ ಹಣದ ವರ್ಗಾವಣೆಯನ್ನು ಪತ್ತೆಹಚ್ಚಲು ಸಚಿವರು ಸಿಬಿಐನ ನೂತನ ಸೈಬರ್ ಕ್ರೈಮ್ ಬ್ರಾಂಚ್ ಅನ್ನು ಉದ್ಘಾಟಿಸಿದರು. ಈ ವಿಭಾಗವು ಅತ್ಯಾಧುನಿಕ ಫೋರೆನ್ಸಿಕ್ ಸಾಧನಗಳನ್ನು ಬಳಸಿಕೊಂಡು ಅಪರಾಧಿಗಳ ಹೆಡೆಮುರಿ ಕಟ್ಟಲಿದೆ.
ದೇಶದ ಸೈಬರ್ ವ್ಯವಸ್ಥೆಯ ಇಂದಿನ ಸ್ಥಿತಿಯ ಬಗ್ಗೆ ಗೃಹ ಸಚಿವರು ಕೆಲವು ಆಘಾತಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ದೇಶದಲ್ಲಿ ಸರಾಸರಿ ಪ್ರತಿ 37 ಸೆಕೆಂಡಿಗೆ ಒಬ್ಬ ವ್ಯಕ್ತಿ ಸೈಬರ್ ವಂಚನೆಗೆ ಬಲಿಯಾಗುತ್ತಿದ್ದಾನೆ. ಈವರೆಗೆ ದೇಶದಲ್ಲಿ ಸುಮಾರು 20,000 ಕೋಟಿ ರೂಪಾಯಿ ವಂಚನೆಯಾಗಿದ್ದು, ಇದರಲ್ಲಿ 8,189 ಕೋಟಿ ರೂಪಾಯಿಗಳನ್ನು ಫ್ರೀಜ್ ಮಾಡಲು ಸರ್ಕಾರ ಯಶಸ್ವಿಯಾಗಿದೆ ಎಂದರು. 2014 ರಲ್ಲಿ 25 ಕೋಟಿ ಇದ್ದ ಇಂಟರ್ನೆಟ್ ಬಳಕೆದಾರರ ಸಂಖ್ಯೆ 2026 ರ ಹೊತ್ತಿಗೆ 100 ಕೋಟಿ ದಾಟಿದೆ, ಜಗತ್ತಿನ ಪ್ರತಿ ಎರಡನೇ ಡಿಜಿಟಲ್ ವ್ಯವಹಾರ ಭಾರತದಲ್ಲಿ ನಡೆಯುತ್ತಿದ್ದು, 2024 ರಲ್ಲಿ 181 ಬಿಲಿಯನ್ ವ್ಯವಹಾರಗಳು ದಾಖಲಾಗಿವೆ ಎಂದು ವಿವರಿಸಿದರು.
ವಂಚನೆ ಮಾಡಿದ ಹಣವನ್ನು ಬಚ್ಚಿಡಲು ಅಪರಾಧಿಗಳು ಬಳಸುವ ‘ಮೂಲ್ ಅಕೌಂಟ್’ಗಳನ್ನು (Mule Accounts) ಪತ್ತೆಹಚ್ಚಲು ಆರ್‌ಬಿಐ ಸಹಯೋಗದೊಂದಿಗೆ ‘ಮೂಲ್ ಅಕೌಂಟ್ ಹಂಟರ್’ ಎಂಬ ವಿಶೇಷ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಈ ಖಾತೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎಲ್ಲಾ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸರ್ಕಾರವು ಸೈಬರ್ ಅಪರಾಧಿಗಳ ಮೂಲಕ್ಕೆ ಕೈಹಾಕಿದ್ದು, ಈವರೆಗೆ ಕೈಗೊಂಡ ಕ್ರಮಗಳು ಇಂತಿವೆ:
-
12 ಲಕ್ಷಕ್ಕೂ ಹೆಚ್ಚು ಶಂಕಾಸ್ಪದ ಸಿಮ್ (SIM) ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ.
-
3 ಲಕ್ಷಕ್ಕೂ ಹೆಚ್ಚು ಮೊಬೈಲ್ ಐಎಂಇಐ (IMEI) ಸಂಖ್ಯೆಗಳನ್ನು ಬ್ಲಾಕ್ ಮಾಡಲಾಗಿದೆ.
-
ಈವರೆಗೂ ಸುಮಾರು 20,853 ಸೈಬರ್ ಅಪರಾಧಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಸಾರ್ವಜನಿಕರಿಗೆ ಕಿವಿಮಾತು:
ಸೈಬರ್ ವಂಚನೆಗೊಳಗಾದವರು ಕೂಡಲೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡುವಂತೆ ಅಮಿತ್ ಶಾ ಮನವಿ ಮಾಡಿದ್ದಾರೆ. ಪ್ರತಿಕ್ರಿಯೆಯ ವೇಗವೇ (Speed of Response) ಸೈಬರ್ ವಂಚಕರ ವಿರುದ್ಧದ ದೊಡ್ಡ ಆಯುಧ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಡಿಸೆಂಬರ್ 2026 ರ ವೇಳೆಗೆ ದೇಶದ ಎಲ್ಲಾ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು I4C (Indian Cyber Crime Coordination Centre) ನೊಂದಿಗೆ ಜೋಡಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸರ್ಕಾರ ಹೊಂದಿದೆ.





