ಕಿರುತೆರೆ ನಟಿ, ಬಿಗ್‌ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಒಂದರ ಹಿಂದೆ ಒಂದಾಗಿ ಬರುತ್ತಿರುವ ಪ್ರಾಜೆಕ್ಟ್‌ಗಳ ನಡುವೆ, ಚೆಂದದ ರೀಲ್ಸ್‌ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಐಶ್ವರ್ಯಾ ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ನಟ ವರುಣ್ ಜೊತೆಗಿನ ರೊಮ್ಯಾಂಟಿಕ್ ರೀಲ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಐಶ್ವರ್ಯಾ ಸಿಂಧೋಗಿ ಹಾಗೂ ವರುಣ್ ಒಟ್ಟಿಗೆ ಮಾಡಿದ್ದ “ಬೆಳಕಿನ ಕವಿತೆ ಬೆರಗಿಗೆ ಸೋತೆ ಬೆಳದಿಂಗಳೇ ಮೆರವಣಿಗೆ” ಹಾಡಿನ ರೀಲ್ಸ್ ಅಭಿಮಾನಿಗಳ ಮನಗೆದ್ದಿತ್ತು. ಸಾಫ್ಟ್ ರೊಮ್ಯಾನ್ಸ್ ಮತ್ತು ಅಭಿನಯದಿಂದ ಈ ವಿಡಿಯೋ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿತ್ತು. ಈಗ ಅದೇ ರೀಲ್ಸ್‌ನ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮತ್ತೊಮ್ಮೆ ಸುದ್ದಿಯಲ್ಲಿದೆ.
ಈ ಮೇಕಿಂಗ್ ಕ್ಲಿಪ್‌ನಲ್ಲಿ, ತೆರೆಮೇಲೆ ಕೆಲ ನಿಮಿಷಗಳ ಸುಂದರ ದೃಶ್ಯವನ್ನು ತೋರಿಸಲು ಹಿಂದೆ ಎಷ್ಟೊಂದು ಶ್ರಮ, ತಯಾರಿ ಮತ್ತು ತಂಡದ ಕೆಲಸ ಇರುತ್ತದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ರೊಮ್ಯಾಂಟಿಕ್ ದೃಶ್ಯಗಳು ಅಷ್ಟೇ ಸುಲಭವಾಗಿ ಮೂಡಿ ಬರುವುದಿಲ್ಲ ಎಂಬುದನ್ನು ಈ ವಿಡಿಯೋ ಮತ್ತೊಮ್ಮೆ ಸಾಬೀತು ಮಾಡಿದೆ.
ಚಾಕ್ಲೆಟ್ ಹೀರೋ ಲುಕ್‌ನಲ್ಲಿ ವರುಣ್
ನಟ ವರುಣ್ ಹಲವು ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದವರು. ಡ್ಯಾನ್ಸಿಂಗ್ ಮಾತ್ರವಲ್ಲದೆ, ಉತ್ತಮ ಅಭಿನಯದ ಮೂಲಕವೂ ತಾನು ಒಳ್ಳೆಯ ನಟ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ವರುಣ್, ತಮ್ಮ ದಿನಚರಿ ಹಾಗೂ ಕೆಲಸದ ಅಪ್‌ಡೇಟ್‌ಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಐಶ್ವರ್ಯಾ ಜೊತೆಗಿನ ಈ ರೀಲ್ಸ್‌ನಲ್ಲಿ ವರುಣ್ ಚಾಕ್ಲೆಟ್ ಹೀರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನಸ್ಸು ಗೆದ್ದಿದೆ.
ಮೇಕಿಂಗ್ ವಿಡಿಯೋದಲ್ಲಿ ಏನಿದೆ?
ಮೇಕಿಂಗ್ ಕ್ಲಿಪ್ ವರುಣ್ ಮೇಕಪ್ ಹಾಕಿಕೊಳ್ಳುವ ಕ್ಷಣದಿಂದಲೇ ಆರಂಭವಾಗುತ್ತದೆ. ಪ್ರತಿಯೊಂದು ಶಾಟ್ ಪರ್ಫೆಕ್ಟ್ ಆಗಿ ಕಾಣಲು ಎಷ್ಟೆಲ್ಲಾ ಕಸರತ್ತು ಮಾಡಲಾಗಿದೆ ಎಂಬುದು ವಿಡಿಯೋದಲ್ಲಿ ಕಾಣಿಸುತ್ತದೆ. ಕ್ಯಾಮೆರಾ ಎದುರು ನಿಂತು ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡುವಾಗ, ಸುತ್ತಲೂ ತಾಂತ್ರಿಕ ತಂಡದ ಸದಸ್ಯರು, ಲೈಟಿಂಗ್, ಕ್ಯಾಮೆರಾ ಮೂವ್ಮೆಂಟ್‌ಗಳು ಎಲ್ಲವೂ ಒಟ್ಟಾಗಿ ಕೆಲಸ ಮಾಡುತ್ತವೆ. ಕೆಲ ದೃಶ್ಯಗಳಿಗೆ ರೀಟೇಕ್‌ಗಳು ನಡೆದಿದ್ದು, ಒಂದೊಂದು ಫ್ರೇಮ್ ಎಷ್ಟು ಜಾಗರೂಕತೆಯಿಂದ ಚಿತ್ರೀಕರಿಸಲಾಗಿದೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.
ಡಿಸೆಂಬರ್ 27ರಂದು ಪೋಸ್ಟ್ ಮಾಡಲಾದ ಈ ಮೇಕಿಂಗ್ ವಿಡಿಯೋ ಈಗಾಗಲೇ 40 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಭಿಮಾನಿಗಳು “ತೆರೆ ಹಿಂದೆ ಇರುವ ಶ್ರಮ ನಿಜಕ್ಕೂ ಮೆಚ್ಚುವಂತದ್ದು” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಬಿಗ್‌ಬಾಸ್ ಸ್ಪರ್ಧಿ ಐಶ್ವರ್ಯಾ
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಐಶ್ವರ್ಯಾ ಸಿಂಧೋಗಿ, ಸೃಜನ್ ಲೋಕೇಶ್ ನಿರ್ದೇಶನದ ‘ಸಪ್ನೋಂಕಿ ರಾಣಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ನಂತರ ಸಿಂಹಾದ್ರಿ, ಮಟಾಷ್, ಸಂಯುಕ್ತ 2, ಸೈತಾನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ‘ಮಂಗಳ ಗೌರಿ ಮದುವೆ’ ಸೀರಿಯಲ್ ಐಶ್ವರ್ಯಾ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು.





