ನವದೆಹಲಿ, ಫೆಬ್ರವರಿ 01: ಕೇಂದ್ರ ಬಜೆಟ್ ಮಂಡನೆಯ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಹೆಚ್ಚಿಸಿದ್ದು, ಈ ಹೊಸ ದರಗಳು ಫೆಬ್ರವರಿ 1, 2026ರಿಂದಲೇ ಜಾರಿಗೆ ಬಂದಿವೆ. ಇದರ ಪರಿಣಾಮವಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಧಾಬಾಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.
ತೈಲ ಮಾರುಕಟ್ಟೆ ಕಂಪನಿಗಳು ಪ್ರತೀ ತಿಂಗಳ ಮೊದಲ ದಿನ ವಾಣಿಜ್ಯ ಹಾಗೂ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಪರಿಷ್ಕರಿಸುವ ಪದ್ಧತಿಯನ್ನು ಅನುಸರಿಸುತ್ತಿವೆ. ಫೆಬ್ರವರಿ ತಿಂಗಳ ಆರಂಭದಲ್ಲೇ ವಾಣಿಜ್ಯ ಸಿಲಿಂಡರ್ ದರದಲ್ಲಿ ಏರಿಕೆ ಘೋಷಣೆ ಮಾಡಲಾಗಿದೆ. ಜನವರಿ ತಿಂಗಳಲ್ಲಿ ಕೂಡ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 111 ರೂಪಾಯಿ ಹೆಚ್ಚಿಸಲಾಗಿತ್ತು. ಇದೀಗ ಸತತ ಎರಡನೇ ತಿಂಗಳು ಬೆಲೆ ಏರಿಕೆಯಾಗಿರುವುದು ವಾಣಿಜ್ಯ ಬಳಕೆದಾರರಲ್ಲಿ ಅಸಮಾಧಾನ ಮೂಡಿಸಿದೆ.
ಇಂದಿನಿಂದ ಜಾರಿಯಾದ ಹೊಸ ದರದಂತೆ, ದೆಹಲಿಯಲ್ಲಿ ಈವರೆಗೆ 1691.50 ರೂ. ಇದ್ದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1740.50 ರೂ.ಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 1844.50 ರೂ. ಆಗಿದ್ದರೆ, ಮುಂಬೈನಲ್ಲಿ ಈವರೆಗೆ 1642.50 ರೂ. ಇದ್ದ ದರ ಇದೀಗ 1692 ರೂ.ಗೆ ತಲುಪಿದೆ. ಈ ದರ ಏರಿಕೆ ಹೋಟೆಲ್ ಉದ್ಯಮ, ಆಹಾರ ಸೇವಾ ಕ್ಷೇತ್ರ ಹಾಗೂ ಸಣ್ಣ ವ್ಯಾಪಾರಿಗಳಿಗೆ ನೇರವಾಗಿ ಹೊಡೆತ ನೀಡುವ ಸಾಧ್ಯತೆ ಇದೆ.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮುಖ್ಯವಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರಸ್ತೆಬದಿ ತಿನಿಸು ಅಂಗಡಿಗಳು ಮತ್ತು ಕೈಗಾರಿಕಾ ವಲಯದಲ್ಲಿ ಬಳಸಲಾಗುತ್ತದೆ. ಈಗಾಗಲೇ ಕಚ್ಚಾ ವಸ್ತುಗಳ ಬೆಲೆ, ಕಾರ್ಮಿಕ ವೆಚ್ಚ ಮತ್ತು ವಿದ್ಯುತ್ ದರಗಳ ಏರಿಕೆಯಿಂದ ಸಂಕಷ್ಟದಲ್ಲಿರುವ ವ್ಯಾಪಾರಿಗಳಿಗೆ ಈ ದರ ಏರಿಕೆ ಮತ್ತಷ್ಟು ತೊಂದರೆ ತಂದಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ, ಸಾಮಾನ್ಯ ಜನರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ತಂದ ಸುದ್ದಿ ಎಂದರೆ, ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇಂಡಿಯನ್ ಆಯಿಲ್ ಪ್ರಕಟಿಸಿದ ಮಾಹಿತಿಯಂತೆ, ದೆಹಲಿಯಲ್ಲಿ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ 853 ರೂ. ಆಗಿಯೇ ಮುಂದುವರಿದಿದೆ. ಉತ್ತರ ಪ್ರದೇಶದಲ್ಲಿ ಇದು 850.50 ರೂ. ಆಗಿದ್ದರೆ, ಪಾಟ್ನಾದಲ್ಲಿ 951 ರೂ., ಮುಂಬೈನಲ್ಲಿ 852.50 ರೂ. ಹಾಗೂ ಲಕ್ನೋದಲ್ಲಿ 890.50 ರೂ. ದರದಲ್ಲಿ ಲಭ್ಯವಿದೆ.
ಹಿಂದಿನ ತಿಂಗಳ ದರ ಚಲನವಲನಗಳನ್ನು ಗಮನಿಸಿದರೆ, ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಗಳು ಹೆಚ್ಚಳವಾಗಿವೆ. ಆದರೆ ಕಳೆದ ವರ್ಷದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ 5 ರೂ. ಮತ್ತು 10 ರೂ.ಗಳಷ್ಟು ಬೆಲೆ ಇಳಿಕೆ ಮಾಡಲಾಗಿತ್ತು. ಅಕ್ಟೋಬರ್ 1ರಂದು ಕೇವಲ 15.50 ರೂ.ಗಳ ಅಲ್ಪ ಏರಿಕೆ ಕಂಡುಬಂದಿತ್ತು. ಅದಕ್ಕೂ ಮೊದಲು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಸತತ ಆರು ತಿಂಗಳುಗಳ ಕಾಲ ಇಳಿಕೆ ಕಂಡಿದ್ದವು.
ಕಳೆದ ವರ್ಷದ ಬಜೆಟ್ ದಿನವಾದ ಫೆಬ್ರವರಿ 1, 2025ರಂದು ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯಲ್ಲಿ 6.50 ರೂ.ಗಳಷ್ಟು ಇಳಿಕೆ ಮಾಡಲಾಗಿತ್ತು.





