ಬೆಂಗಳೂರು, ಜನವರಿ 27: ವೇತನ ಹಾಗೂ ವೇತನ ಪರಿಷ್ಕರಣೆ ಸಂಬಂಧಿತ ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ಜನವರಿ 29ರಂದು ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ (KSRTC) ಆಡಳಿತ ಮಂಡಳಿ ಖಡಕ್ ಎಚ್ಚರಿಕೆ ನೀಡಿ, ಮುಷ್ಕರಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದೆ. ಕರ್ತವ್ಯಕ್ಕೆ ಗೈರು ಹಾಜರಾದರೆ ‘ನೋ ವರ್ಕ್ ನೋ ಪೇ’ ಎಂದು KSRTC ಎಂಡಿ ಅಕ್ರಂ ಪಾಷ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿ ನಾಲ್ಕು ನಿಗಮಗಳ ನೌಕರರು ಜಂಟಿ ಕ್ರಿಯಾ ಸಮಿತಿ ಮೂಲಕ ಬೆಂಗಳೂರು ಚಲೋಗೆ ಕರೆ ನೀಡಿದ್ದಾರೆ. 01-01-2020ರಿಂದ 28-02-2023ರ ವರೆಗೆ ಬಾಕಿ ಇರುವ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಹಣ ಬಿಡುಗಡೆ, 01-01-2024ರಿಂದ ಜಾರಿಗೆ ಬರುವ ಹೊಸ ನಾಲ್ಕು ವರ್ಷದ ವೇತನ ಒಪ್ಪಂದ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜನವರಿ 29ರಂದು ಸಾವಿರಾರು ನೌಕರರು ಬೆಂಗಳೂರಿಗೆ ತೆರಳಿ ಬೃಹತ್ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರು, ಯಾವುದೇ ರೀತಿಯ ಮುಷ್ಕರ ಅಥವಾ ಪ್ರತಿಭಟನೆಗೆ ನೌಕರರು ಬೆಂಬಲ ನೀಡಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ, ಜನವರಿ 29ರಂದು ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ಯಾವುದೇ ರಜೆ ಮಂಜೂರು ಮಾಡಬಾರದು. ಕರ್ತವ್ಯಕ್ಕೆ ಹಾಜರಾಗದ ನೌಕರರ ವಿರುದ್ಧ ‘ನೋ ವರ್ಕ್ ನೋ ಪೇ’ ನಿಯಮ ಜಾರಿಗೊಳಿಸಬೇಕು ಎಂದು ಎಚ್ಚರಿಸಲಾಗಿದೆ. ಅಗತ್ಯವಿದ್ದಲ್ಲಿ ನೌಕರರ ವಾರದ ರಜೆಯನ್ನು ಕೂಡ ರದ್ದುಪಡಿಸಿ ಕರ್ತವ್ಯಕ್ಕೆ ನಿಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಈ ಆದೇಶದಿಂದ ಸಾರಿಗೆ ನೌಕರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟ ನಡೆಸುವುದು ನಮ್ಮ ಹಕ್ಕು. ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸದ ಸರ್ಕಾರ, ಆಡಳಿತಾತ್ಮಕ ಒತ್ತಡದ ಮೂಲಕ ಪ್ರತಿಭಟನೆ ಹತ್ತಿಕ್ಕಲು ಮುಂದಾಗಿದೆ ಎಂದು ನೌಕರ ಸಂಘಗಳು ಆರೋಪಿಸಿವೆ.
ಇನ್ನೊಂದೆಡೆ, ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಒಂದು ವೇಳೆ ನೌಕರರು ಆದೇಶವನ್ನು ಕಡೆಗಣಿಸಿ ಬೆಂಗಳೂರು ಚಲೋಗೆ ತೆರಳಿದರೆ, ರಾಜ್ಯದಾದ್ಯಂತ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ಸಂಪೂರ್ಣ ಅಸ್ತವ್ಯಸ್ತವಾಗುವ ಭೀತಿ ಎದುರಾಗಿದೆ.
ಹೀಗಾಗಿ ಜನವರಿ 29ರಂದು ಅತ್ಯವಶ್ಯಕ ಪ್ರಯಾಣವಿದ್ದವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು ಎಂದು ಪ್ರಯಾಣಿಕರಿಗೆ ಸಲಹೆ ನೀಡಲಾಗುತ್ತಿದೆ. ರೈಲು, ಮೆಟ್ರೋ, ಖಾಸಗಿ ವಾಹನ ಅಥವಾ ಆನ್‌ಲೈನ್ ಕ್ಯಾಬ್ ಸೇವೆಗಳತ್ತ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ.





