ಪೇಶಾವರ: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ ನಡೆದ ವಿವಾಹ ಸಮಾರಂಭದ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತು ಮಂದಿ ಗಾಯಗೊಂಡಿದ್ದಾರೆ. ಘಟನೆಯು ಕೋಹಾಟ್ ಜಿಲ್ಲೆಯ ಡೇರಾ ಇಸ್ಮಾಯಿಲ್ ಖಾನ್ ಬಳಿಯ ಖುರೇಷಿ ಮೋರ್ ಪ್ರದೇಶದಲ್ಲಿ ಸಂಭವಿಸಿದೆ.
ಜಿಲ್ಲಾ ಪೊಲೀಸ್ ಅಧಿಕಾರಿ ಸಜ್ಜದ್ ಅಹ್ಮದ್ ಸಾಹಿಬ್ಬಾದಾ ಅವರ ಮಾಹಿತಿ ಪ್ರಕಾರ, ಖುರೇಷಿ ಮೋರ್ ಪ್ರದೇಶದ ಬಳಿ ಇರುವ ಶಾಂತಿ ಸಮಿತಿ ಮುಖ್ಯಸ್ಥ ನೂರ್ ಅಲಮ್ ಮೆಹ್ಮದ್ ಅವರ ನಿವಾಸದಲ್ಲಿ ಮದುವೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅತಿಥಿಗಳು ಸಂಭ್ರಮದಿಂದ ನೃತ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಅಚಾನಕ್ ಆತ್ಮಾಹುತಿ ದಾಳಿಕೋರ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ. ಈ ಬಾಂಬ್ ಸ್ಫೋಟದ ಪರಿಣಾಮ, ಸಮಾರಂಭ ನಡೆಯುತ್ತಿದ್ದ ಕೋಣೆಯ ಛಾವಣಿ ಕುಸಿದು ಬಿದ್ದಿದ್ದು, ಅವಶೇಷಗಳ ಅಡಿಯಲ್ಲಿ ಅನೇಕರು ಸಿಲುಕಿಕೊಂಡಿದ್ದರು..
ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆದರೆ ಛಾವಣಿ ಕುಸಿದು ಬಿದ್ದ ಕಾರಣದಿಂದಾಗಿ ಅವಶೇಷಗಳಡಿ ಸಿಲುಕಿದ್ದವರನ್ನು ಹೊರತೆಗೆಯುವುದು ಕಷ್ಟಕರವಾಯಿತು. ಸ್ಥಳೀಯರು ಕೂಡ ಗಾಯಾಳುಗಳನ್ನು ರಕ್ಷಿಸಲು ಶ್ರಮಿಸಿದರು.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ರಕ್ಷಣಾ ವಕ್ತಾರ ಬಿಲಾಲ್ ಅಹ್ಮದ್ ಫೈಜಿ ಮಾತನಾಡಿ, “ಈ ದಾಳಿಯಲ್ಲಿ ಐದು ಮಂದಿ ಮೃತದೇಹಗಳನ್ನು ಮತ್ತು ಹತ್ತು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಶಾಂತಿ ಸಮಿತಿಯ ನಾಯಕ ವಹೀದುಲ್ಲಾ ಮೆಹ್ಮದ್, ಅಲಿಯಾಸ್ ಜಿಗಿ ಮೆಹ್ಮದ್ ಕೂಡ ಮೃತಪಟ್ಟಿದ್ದಾರೆ. ಅವರು ಸ್ಥಳೀಯವಾಗಿ ಶಾಂತಿ ಕಾಪಾಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖ ನಾಯಕನಾಗಿದ್ದರು.
ಘಟನೆಯ ಬಳಿಕ ಭದ್ರತಾ ಪಡೆಗಳು ಸಂಪೂರ್ಣ ಪ್ರದೇಶವನ್ನು ಸುತ್ತುವರಿದು ತಪಾಸಣೆ ನಡೆಸುತ್ತಿವೆ. ಬಾಂಬ್ ದಾಳಿಗೆ ಕಾರಣ ಹಾಗೂ ಅದರ ಹಿಂದೆ ಇರುವ ಉಗ್ರ ಸಂಘಟನೆ ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ. ಸ್ಫೋಟದಲ್ಲಿ ಬಳಸಲಾದ ಸ್ಫೋಟಕ ವಸ್ತುಗಳ ಸ್ವರೂಪ ಮತ್ತು ದಾಳಿಕೋರನ ಗುರುತಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.





