ಬೆಂಗಳೂರು, ಜನವರಿ 24: ಕರ್ನಾಟಕ ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಶೀತ ಮತ್ತು ಒಣ ಹವೆಯ ವಾತಾವರಣ ಆವರಿಸಿಕೊಂಡಿದ್ದು, ಇಂದೂ ಅದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ನಾಲ್ಕು ದಿನಗಳವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ತಿಳಿಸಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಬೆಳಗಿನ ಸಮಯದಲ್ಲಿ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದ್ದು, ಚಳಿಯ ತೀವ್ರತೆ ಹೆಚ್ಚಾಗಿದೆ.
ರಾಜ್ಯದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿಯೂ ಚಳಿಯ ಜೊತೆಗೆ ಒಣ ಹವೆಯ ವಾತಾವರಣ ಮುಂದುವರಿಯಲಿದೆ. ಬೆಳಗಿನ ಹೊತ್ತಿನಲ್ಲಿ ಕನಿಷ್ಠ ತಾಪಮಾನ ಇಳಿಕೆಯಾಗುತ್ತಿದ್ದು, ಮಧ್ಯಾಹ್ನ ವೇಳೆಗೆ ಗರಿಷ್ಠ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಈ ತಾಪಮಾನ ವ್ಯತ್ಯಾಸದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ದಕ್ಷಿಣ ಒಳನಾಡಿನಲ್ಲಿ ಒಣ ಹವೆ
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಮುಂದುವರಿಯಲಿದೆ. ಇದರ ಜೊತೆಗೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ತೀವ್ರ ಚಳಿ ವಾತಾವರಣ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಭಾಗಗಳಲ್ಲಿ ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ತೀವ್ರ ಚಳಿ ಅನುಭವವಾಗಲಿದ್ದು, ಕೆಲವೆಡೆ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ರೈತರು ಬೆಳಗಿನ ಹೊತ್ತಿನಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗುವಾಗ ಸೂಕ್ತ ಮುಂಜಾಗ್ರತೆ ವಹಿಸಬೇಕೆಂದು ಸಲಹೆ ನೀಡಲಾಗಿದೆ.
ಉತ್ತರ ಒಳನಾಡು ಭಾಗದಲ್ಲೂ ಚಳಿ ಪ್ರಭಾವ
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಒಣ ಹವೆಯ ವಾತಾವರಣ ದಾಖಲಾಗುತ್ತಿದ್ದು, ಇಂದೂ ಇದೇ ಪರಿಸ್ಥಿತಿ ಮುಂದುವರಿಯಲಿದೆ.
ಕರಾವಳಿಯಲ್ಲೂ ಶುಷ್ಕ ವಾತಾವರಣ
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣವೇ ಮುಂದುವರಿಯಲಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಹೆಚ್ಚಿನ ತೇವಾಂಶ ಕಂಡುಬರುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಶುಷ್ಕತೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಚರ್ಮದ ಸಮಸ್ಯೆ, ಶೀತ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಮಂಜು ಮತ್ತು ಚಳಿ
ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮಂಜು ಕವಿದ ವಾತಾವರಣ ಕಂಡುಬಂದಿದೆ. ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳಗಿನ ಸಮಯದಲ್ಲಿ ಚಳಿ ತೀವ್ರವಾಗಿದ್ದು, ವಾಹನ ಸವಾರರು ಮಂಜಿನ ಕಾರಣದಿಂದ ಜಾಗರೂಕತೆಯಿಂದ ಚಾಲನೆ ಮಾಡುವಂತೆ ಸೂಚಿಸಲಾಗಿದೆ.
ಚಳಿಯಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಬೆಚ್ಚಗಿನ ಉಡುಪು ಧರಿಸುವುದು, ಬಿಸಿ ಆಹಾರ ಸೇವಿಸುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ಅಗತ್ಯವೆಂದು ವೈದ್ಯರು ಸಲಹೆ ನೀಡಿದ್ದಾರೆ. ಶೀತ, ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ
ಚಳಿ ಮತ್ತು ಒಣ ಹವೆಯಿಂದ ಚರ್ಮ ಒಣಗುವುದು, ಗಂಟಲು ನೋವು, ಕಣ್ಣಿನ ಒಣತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಮಾಯಿಶ್ಚರೈಜರ್ ಬಳಕೆ, ಬಿಸಿ ಪಾನೀಯ ಸೇವನೆ, ಪೋಷಕಾಂಶ ಸಮೃದ್ಧ ಆಹಾರ ಸೇವನೆ ಮತ್ತು ವಿಶ್ರಾಂತಿ ಅತ್ಯಂತ ಅಗತ್ಯವಾಗಿದೆ. ಹೊರಗಡೆ ಹೋಗುವಾಗ ಮುಖ ಮುಚ್ಚಿಕೊಳ್ಳುವುದು ಹಾಗೂ ಶೀತ ಗಾಳಿಯಿಂದ ದೂರವಿರುವುದು ಒಳಿತು.





