ಬೆಂಗಳೂರು: ಬ್ಯಾಂಕ್‌ಗೆ ಸಂಬಂಧಿಸಿದ ಯಾವುದಾದರೂ ಪ್ರಮುಖ ಕೆಲಸಗಳನ್ನು ಇಟ್ಟುಕೊಂಡಿದ್ದರೇ, ಇಂದೇ ಮುಗಿಸಿಕೊಳ್ಳುವುದು ಒಳಿತು. ಏಕೆಂದರೆ, ನಾಳೆಯಿಂದ ಸತತ ನಾಲ್ಕು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಳ್ಳಲಿವೆ. ವಾರಾಂತ್ಯದ ರಜೆಗಳು, ಗಣರಾಜ್ಯೋತ್ಸವ ಮತ್ತು ಬ್ಯಾಂಕ್ ಸಿಬ್ಬಂದಿಗಳ ರಾಷ್ಟ್ರಮಟ್ಟದ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ ಸಿಗುವುದಿಲ್ಲ ಹೀಗಾಗಿ ಬ್ಯಾಂಕ್‌ನಲ್ಲಿ ಏನಾದರೂ ಕೆಲಸಗಳಿದ್ದರೇ ಇಂದೇ ಮುಗಿಸಿಕೊಳ್ಳಿ.
ಜನವರಿ 24 (ಶನಿವಾರ)-ತಿಂಗಳ ನಾಲ್ಕನೇ ಶನಿವಾರದ ಹಿನ್ನೆಲೆ ಬ್ಯಾಂಕ್ ರಜೆ. ಜನವರಿ 25 (ಭಾನುವಾರ)-ವಾರದ ಸಾರ್ವತ್ರಿಕ ರಜೆ, ಜನವರಿ 26 (ಸೋಮವಾರ)-ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರೀಯ ರಜೆ. ಜನವರಿ 27 (ಮಂಗಳವಾರ)- ಬ್ಯಾಂಕ್ ಸಿಬ್ಬಂದಿಗಳ ಬೇಡಿಕೆ ಈಡೇರಿಕೆಗಾಗಿ ರಾಷ್ಟ್ರಮಟ್ಟದ ಮುಷ್ಕರವಿದೆ.
ಮುಷ್ಕರಕ್ಕೆ ಕಾರಣವೇನು?
ಬ್ಯಾಂಕ್ ಸಿಬ್ಬಂದಿಗಳು ದೀರ್ಘಕಾಲದಿಂದ ತಮ್ಮ ಪ್ರಮುಖ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಪ್ರಸ್ತುತ ಬ್ಯಾಂಕ್‌ಗಳಲ್ಲಿ ವಾರಕ್ಕೆ ಆರು ದಿನ ಕೆಲಸದ ಅವಧಿ ಇದೆ (ಎರಡು ಶನಿವಾರ ಹೊರತುಪಡಿಸಿ). ಆದರೆ, ಐಟಿ ಕಂಪನಿಗಳ ಮಾದರಿಯಲ್ಲಿ ವಾರಕ್ಕೆ ಕೇವಲ 5 ದಿನ ಕೆಲಸ (5 Days Banking) ನೀಡಬೇಕು ಮತ್ತು ವಾರದ ಎರಡು ದಿನ (ಶನಿವಾರ ಮತ್ತು ಭಾನುವಾರ) ಕಡ್ಡಾಯ ರಜೆ ನೀಡಬೇಕು ಎಂಬುದು ಸಿಬ್ಬಂದಿಗಳ ಪರಮುಖ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರದ ಕಾರಣ ಜನೆವರಿ 27 ರಂದು ಪ್ರತಿಭಟನೆಗೆ ಕರೆ ನೀಡಲಾಗಿದೆ.
ಸ್ಥಗಿತಗೊಳ್ಳಲಿರುವ ಸೇವೆಗಳು
ಈ ನಾಲ್ಕು ದಿನಗಳ ಅವಧಿಯಲ್ಲಿ ಬ್ಯಾಂಕ್ ಶಾಖೆಗಳಲ್ಲಿ ನೇರ ವಹಿವಾಟು ಸಾಧ್ಯವಿರುವುದಿಲ್ಲ. ಇದರಿಂದಾಗಿ ಕೆಳಗಿನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ:
-
ನಗದು ಜಮೆ ಮತ್ತು ಹಿಂಪಡೆಯುವಿಕೆ.
-
ಚೆಕ್ ಕ್ಲಿಯರೆನ್ಸ್ (Cheque Clearance).
-
ಡಿಮ್ಯಾಂಡ್ ಡ್ರಾಫ್ಟ್ (DD) ಪಡೆಯುವುದು.
-
ಬ್ಯಾಂಕ್ ಪಾಸ್‌ಬುಕ್ ಎಂಟ್ರಿ.
-
ಹೊಸ ಖಾತೆ ತೆರೆಯುವುದು ಮತ್ತು ಸಾಲದ ಪ್ರಕ್ರಿಯೆಗಳು.
ಗ್ರಾಹಕರಿಗೆ ಸೂಚನೆ
ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ಎಟಿಎಂ (ATM) ಸೇವೆಗಳು ಮತ್ತು ಮೊಬೈಲ್ ಬ್ಯಾಂಕಿಂಗ್/ನೆಟ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ. ಆದರೆ, ಸತತ ರಜೆ ಇರುವುದರಿಂದ ಎಟಿಎಂಗಳಲ್ಲಿ ಹಣದ ಕೊರತೆ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ತುರ್ತು ಹಣದ ಅವಶ್ಯಕತೆ ಇರುವವರು ಮುನ್ನೆಚ್ಚರಿಕೆ ವಹಿಸುವುದು ಉತ್ತಮ.





