ಬೆಂಗಳೂರು, ಜ.18: ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ವಿವಾಹಿತನಾಗಿದ್ದರೂ ತನ್ನ ಹೆಂಡತಿಯನ್ನು “ಅಕ್ಕ” ಎಂದು ಪರಿಚಯಿಸಿ ಹಣ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಟೆಕ್ಕಿ ಯುವತಿಗೆ ಬರೋಬ್ಬರಿ 1.75 ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ಈ ಸಂಬಂಧ ಒಂದೇ ಕುಟುಂಬದ ಮೂವರು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವೈಟ್ಫೀಲ್ಡ್ ನಿವಾಸಿ ಯುವತಿ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ 2024ರ ಮಾರ್ಚ್ ತಿಂಗಳಲ್ಲಿ ಆರೋಪಿಯಾದ ವಿಜಯ್ ರಾಜ್ ಗೌಡ ಎಂಬಾತನ ಪರಿಚಯವಾಗಿದೆ. ತಾನು ದೊಡ್ಡ ಉದ್ಯಮಿ, ತನ್ನ ಬಳಿ 715 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಹೇಳಿಕೊಂಡಿದ್ದ ಆತ, ಮೊದಲ ಭೇಟಿಯಲ್ಲೇ ಐಶಾರಾಮಿ ಬದುಕಿನ ಕಥೆ ಹೇಳಿ ಯುವತಿಯನ್ನು ನಂಬಿಸಿದ್ದನು..
ಹೆಂಡ್ತಿಯನ್ನೇ ಅಕ್ಕ ಎಂದು ಪರಿಚಯ!
ಆರೋಪಿಯು ಈಗಾಗಲೇ ಮದುವೆಯಾಗಿದ್ದರೂ, “ನಿನ್ನನ್ನೇ ಮದುವೆಯಾಗುತ್ತೇನೆ” ಎಂದು ಭರವಸೆ ನೀಡಿದ್ದಾನೆ. ಕೆಂಗೇರಿ ಬಳಿ ಇರುವ ತನ್ನ ಮನೆಗೆ ಕರೆಸಿ ಕುಟುಂಬದವರನ್ನು ಪರಿಚಯಿಸುವ ವೇಳೆ, ತನ್ನ ಹೆಂಡತಿಯನ್ನು ಸ್ವಂತ ಅಕ್ಕ ಎಂದು ಯುವತಿಗೆ ಪರಿಚಯಿಸಿದ್ದಾನೆ. ಈ ನಾಟಕದಿಂದ ಯುವತಿ ಯಾವುದೇ ಸಂಶಯವಿಲ್ಲದೆ ಆತನ ಮಾತುಗಳಿಗೆ ಮಾರು ಹೋಗಿದ್ದಾಳೆ.
‘ಇಡಿ ಕೇಸ್ ಇದೆ’ ಎಂದು ಹಣಕ್ಕೆ ಬೇಡಿಕೆ
ಪರಿಚಯವಾದ ಕೆಲವೇ ದಿನಗಳಲ್ಲಿ, ನನ್ನ ವಿರುದ್ಧ ಆಸ್ತಿ ಸಂಬಂಧಿ ಇಡಿ (ED) ಪ್ರಕರಣ ದಾಖಲಾಗಿದೆ, ಬ್ಯಾಂಕ್ ಖಾತೆಗಳು ಫ್ರೀಜ್ ಆಗಿವೆ ಎಂದು ಹೇಳಿದ್ದಾನೆ. ಕೋರ್ಟ್ ದಾಖಲೆಗಳು, ನಕಲಿ ಕಾಗದ ಪತ್ರಗಳನ್ನು ತೋರಿಸಿ ಮೊದಲಿಗೆ 15 ಸಾವಿರ ರೂಪಾಯಿ ಪಡೆದಿದ್ದಾನೆ. ನಂತರ “ಒಟ್ಟಿಗೆ ಬಿಸಿನೆಸ್ ಮಾಡೋಣ” ಎಂದು ಯುವತಿ ಹೆಸರಲ್ಲಿ ಲೋನ್ ಮಾಡಿಸಿದ್ದು, ಸ್ನೇಹಿತರ ಬಳಿಯೂ ಸಾಲ ಪಡೆಯುವಂತೆ ಪ್ರೇರೇಪಿಸಿದ್ದಾನೆ.
ಹಂತಹಂತವಾಗಿ ಕೋಟಿ ಕೋಟಿ ಹಣ
ಮದುವೆಗೆ ಹೆಣ್ಣು ನೋಡಲು ಬರುತ್ತೇವೆ, ದಿನಾಂಕ ಫಿಕ್ಸ್ ಮಾಡೋಣ ಎಂದು ನಂಬಿಸಿ, ಮತ್ತೆ ಮತ್ತೆ ಹಣ ಪಡೆದಿದ್ದಾನೆ. ಯುವತಿಯ ಸ್ನೇಹಿತರು, ಸಂಬಂಧಿಕರಿಂದಲೂ ಲಕ್ಷ ಲಕ್ಷ ರೂಪಾಯಿ ಸಾಲವಾಗಿ ಪಡೆದು, ಹಂತಹಂತವಾಗಿ ಒಟ್ಟು 1.75 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ, ಹಣ ಬಿಡುಗಡೆ ಆಗುತ್ತೆ ಎಂದು ನಿರಂತರ ಸುಳ್ಳು ಹೇಳಿ ಕಾಲ ಕಳೆಯುತ್ತಿದ್ದಾನೆ.
ಹಣದ ಒತ್ತಡ ಹೆಚ್ಚಾದಾಗ, ಆರೋಪಿಯು 22 ಲಕ್ಷ ರೂಪಾಯಿ ಮಾತ್ರ ವಾಪಸ್ ನೀಡಿ, ಉಳಿದ ಹಣ ಕೊಡಲು ಹಿಂದೇಟು ಹಾಕಿದ್ದಾನೆ. ಹಣ ಕೇಳಲು ಹೋದ ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ಬೆದರಿಕೆ ಹಾಕಿದ್ದು, ಈ ವೇಳೆ ಅಸಲಿ ಸತ್ಯ ಬಹಿರಂಗವಾಗಿದೆ. ಆರೋಪಿಯು ಮದುವೆಯಾಗಿ ಮಗುವೂ ಹೊಂದಿರುವುದು ಯುವತಿಗೆ ತಿಳಿದಿದೆ.
ಪೊಲೀಸ್ ದೂರು, ತನಿಖೆ ಆರಂಭ
ಮೋಸ ಹೋಗಿರುವುದು ಖಚಿತವಾದ ಬಳಿಕ, ಯುವತಿ ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣವನ್ನು ಬಳಿಕ ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ವಿಜಯ್ ರಾಜ್ ಗೌಡ, ಬೋರೆಗೌಡ ಹಾಗೂ ಸೌಮ್ಯ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಕುರಿತು ತನಿಖೆ ನಡೆಸುತ್ತಿದ್ದಾರೆ.





