ಬೆಂಗಳೂರು: ಶಾಲಾ ಅವಧಿಯಲ್ಲಿ ಪಾಠದ ಒತ್ತಡದಲ್ಲಿ ಮಕ್ಕಳು ನೀರು ಕುಡಿಯುವುದನ್ನೇ ಮರೆತುಬಿಡುತ್ತಾರೆ. ಇದರಿಂದ ಮಕ್ಕಳಲ್ಲಿ ನಿರ್ಜಲೀಕರಣ (Dehydration) ಮತ್ತು ಆರೋಗ್ಯದ ಏರುಪೇರು ಉಂಟಾಗುವ ಸಾಧ್ಯತೆಗಳಿರುತ್ತವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಇನ್ಮುಂದೆ ವಾಟರ್ ಬೆಲ್ (Water Bell) ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಏನಿದು ವಾಟರ್ ಬೆಲ್ ?
ಸಾಮಾನ್ಯವಾಗಿ ಶಾಲೆಯ ಅವಧಿಯಲ್ಲಿ ತರಗತಿಗಳ ಬದಲಾವಣೆಯನ್ನು ಸೂಚಿಸಲು ಅಥವಾ ಬಿಡುವಿನ ಸಮಯವನ್ನು ತಿಳಿಸಲು ಗಂಟೆ ಬಾರಿಸಲಾಗುತ್ತದೆ. ಆದರೆ ಈಗ ಹೊಸದಾಗಿ ಜಾರಿಗೆ ತಂದಿರುವ ಈ ನಿಯಮದ ಪ್ರಕಾರ, ಶಾಲಾ ಅವಧಿಯಲ್ಲಿ ಪ್ರತ್ಯೇಕವಾಗಿ ನೀರಿನ ಬೆಲ್‌ಗಾಗಿ ಬೆ ಮಾಡೆಲಾಗುತ್ತದೆ. ಈ ಗಂಟೆ ಬಾರಿಸಿದಾಗ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ನಿಲ್ಲಿಸಿ ನೀರು ಕುಡಿಯಲು ಸಮಯ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಮಾಡಿದೆ.
ಆರೋಗ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆ
ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಮಕ್ಕಳ ದೈಹಿಕ ಬೆಳವಣಿಗೆಗೆ ಮತ್ತು ಶೈಕ್ಷಣಿಕ ಏಕಾಗ್ರತೆಗೆ ನೀರು ಅತ್ಯವಶ್ಯಕ. ನೀರು ಕುಡಿಯುವುದರಿಂದ ದೇಹದ ಉಷ್ಣತೆ ನಿಯಂತ್ರಣದಲ್ಲಿರುತ್ತದೆ, ಆಹಾರ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಶಾಲಾ ಮಕ್ಕಳು ಆಟವಾಡುವಾಗ ಮತ್ತು ಓದುವಾಗ ನೀರು ಕುಡಿಯುವುದನ್ನು ನಿರ್ಲಕ್ಷಿಸುವುದರಿಂದ ಮೂತ್ರಪಿಂಡದ ಸಮಸ್ಯೆಗಳು ಅಥವಾ ಸುಸ್ತು ಉಂಟಾಗುವ ಅಪಾಯವಿರುತ್ತದೆ. ಈ ಹಿನ್ನೆಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಇಂದ ಹಿಡಿದು ಪ್ರೌಢಶಾಲೆಯವರೆಗಿನ ಎಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಈ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮನವಿ
ವಾಟರ್ ಬೆಲ್ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಹಿಂದೆ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿತ್ತು. ಕೇರಳದಂತಹ ರಾಜ್ಯಗಳಲ್ಲಿ ಈಗಾಗಲೇ ಈ ಪದ್ಧತಿ ಯಶಸ್ವಿಯಾಗಿ ಜಾರಿಯಲ್ಲಿದೆ. ಈ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಶಿಕ್ಷಣ ಇಲಾಖೆಯು, ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಸುತ್ತೋಲೆ ಹೊರಡಿಸಿದೆ. ಶಾಲೆಗಳಲ್ಲಿ ಆಗಾಗ್ಗೆ ವಾಟರ್ ಬೆಲ್ ಹೊಡೆದು ವಿದ್ಯಾರ್ಥಿಗಳಿಗೆ ನೀರು ಕುಡಿಯುವ ಬಗ್ಗೆ ಅರಿವು ಮೂಡಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದೆ.
ಪೋಷಕರು ಕೂಡ ಶಿಕ್ಷಣ ಇಲಾಖೆಯ ಈ ನಿರ್ಧಾರವನ್ನು ಸ್ವಾಗತಿಸಿದ್ದು, ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.





