ವಾಷಿಂಗ್ಟನ್: ಇತ್ತೀಚೆಗೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಕೇವಲ 20 ಅಮೆರಿಕನ್ ಸೈನಿಕರ ಒಂದು ಸಣ್ಣ ತಂಡವು ನೂರಾರು ವೆನೆಜುವೆಲಾ ಭದ್ರತಾ ಪಡೆಗಳನ್ನು ಕ್ಷಣಾರ್ಧದಲ್ಲಿ ನಿಷ್ಕ್ರಿಯಗೊಳಿಸಿದ ಪರಿ ದಿಗ್ರಮೆ ಹುಟ್ಟಿಸುವಂತಿದೆ. ಈ ಕಾರ್ಯಾಚರಣೆಯಲ್ಲಿ ಅಮೆರಿಕವು ಇದುವರೆಗೆ ಜಗತ್ತಿಗೆ ಪರಿಚಯವಿಲ್ಲದ ‘ನಿರ್ದೇಶಿತ ಶಕ್ತಿ ಆಯುಧಗಳನ್ನು’ (Directed Energy Weapons) ಬಳಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿರುವಂತೆ, ವೆನೆಜುವೆಲಾದ ಭದ್ರತಾ ಸಿಬ್ಬಂದಿಯೊಬ್ಬರು ಈ ದಾಳಿಯ ಭೀಕರತೆಯನ್ನು ವಿವರಿಸಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ನಮ್ಮ ಎಲ್ಲಾ ರಾಡಾರ್ ವ್ಯವಸ್ಥೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡವು. ನಂತರ ಡಜನ್‌ಗಟ್ಟಲೆ ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಪ್ರತ್ಯಕ್ಷವಾದವು. ಸುಮಾರು 20 ಅಮೆರಿಕನ್ ಸೈನಿಕರು ನೆಲಕ್ಕಿಳಿದರು. ಅವರ ವೇಗ ಮತ್ತು ಗುಂಡಿನ ದಾಳಿ ಹೆಚ್ಚಿದ್ದರಿಂದ ಪ್ರತಿ ಸೈನಿಕ ನಿಮಿಷಕ್ಕೆ 300 ಸುತ್ತು ಗುಂಡು ಹಾರಿಸುತ್ತಿರುವಂತೆ ಭಾಸವಾಯಿತು ಎಂದು ಅವರು ತಿಳಿಸಿದ್ದಾರೆ.
ಅಮೆರಿಕನ್ ಪಡೆಗಳು ಬಳಸಿದ ಆ ನಿಗೂಢ ಸಾಧನಗಳ ಬಗ್ಗೆ ಮಾತನಾಡಿದ ಸಿಬ್ಬಂದಿ, ಅವರು ಏನನ್ನೋ ಹಾರಿಸಿದರು, ಅದು ಅತ್ಯಂತ ತೀವ್ರವಾದ ಶಬ್ದ ತರಂಗದಂತಿತ್ತು. ಇದ್ದಕ್ಕಿದ್ದಂತೆ ನನ್ನ ತಲೆಯ ಒಳಗಿನಿಂದ ಸ್ಫೋಟಗೊಳ್ಳುತ್ತಿರುವಂತೆ ಭಾಸವಾಯಿತು. ನಮಗೆಲ್ಲರಿಗೂ ತಕ್ಷಣವೇ ಮೂಗಿನಿಂದ ರಕ್ತಸ್ರಾವವಾಗಲು ಪ್ರಾರಂಭವಾಯಿತು, ಹಲವರು ರಕ್ತವನ್ನು ವಾಂತಿ ಮಾಡಿಕೊಂಡರು. ಆ ಸೋನಿಕ್ ಆಯುಧದ ದಾಳಿಯ ನಂತರ ನಮಗೆ ಎದ್ದು ನಿಲ್ಲಲು ಸಹ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ಸೈನಿಕ ವಿವರಿಸಿದ್ದಾನೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು ಈ ಕುರಿತಾದ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು, “ನೀವು ಮಾಡುತ್ತಿರುವುದನ್ನು ನಿಲ್ಲಿಸಿ ಮತ್ತು ಇದನ್ನು ಓದಿ…” ಎಂದು ಶೀರ್ಷಿಕೆ ನೀಡುವ ಮೂಲಕ ಈ ಘಟನೆಯ ಗಾಂಭೀರ್ಯವನ್ನು ದೃಢಪಡಿಸಿದ್ದಾರೆ. ವೆನೆಜುವೆಲಾದ ಆಂತರಿಕ ಸಚಿವಾಲಯದ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಸುಮಾರು 100 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅಮೆರಿಕದ ಮಾಜಿ ಗುಪ್ತಚರ ಮೂಲಗಳ ಪ್ರಕಾರ, ಅಮೆರಿಕವು ವರ್ಷಗಳಿಂದ ಮೈಕ್ರೋವೇವ್‌ಗಳು ಅಥವಾ ಲೇಸರ್‌ಗಳಂತಹ ವಸ್ತುಗಳನ್ನ (Directed Energy Weapons) ಬಳಸುವ ವ್ಯವಸ್ಥೆಯನ್ನು ಹೊಂದಿದೆ. ಇವು ಮನುಷ್ಯನ ನರಮಂಡಲದ ಮೇಲೆ ನೇರ ದಾಳಿ ಮಾಡಿ, ಮೋಟಾರ್ ಕಾರ್ಯಗಳನ್ನು ಸ್ಥಗಿತಗೊಳಿಸಬಲ್ಲವು. ಇದರಿಂದ ತೀವ್ರ ನೋವು, ರಕ್ತಸ್ರಾವ ಉಂಟಾಗುತ್ತದೆ ಎಂದು ತಿಳಿದುಬಂದಿದೆ.





