ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ವಡೋದರಾದ ಕೋಟಂಬಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 28,000 ಅಂತರರಾಷ್ಟ್ರೀಯ ರನ್‌ಗಳ ಗಡಿಯನ್ನು ದಾಟುವ ಮೂಲಕ ವಿಶ್ವದ ಅತ್ಯಂತ ವೇಗದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ ಕೇವಲ 624 ಇನ್ನಿಂಗ್ಸ್‌ಗಳಲ್ಲಿ ಈ ಬೃಹತ್ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಹಿಂದೆ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 644 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಈಗ ಸಚಿನ್ ಅವರಿಗಿಂತ 20 ಇನ್ನಿಂಗ್ಸ್‌ಗಳ ಮುಂಚಿತವಾಗಿಯೇ ಕೊಹ್ಲಿ ಈ ಸಾಧನೆ ಮಾಡುವ ಮೂಲಕ ತಮ್ಮ ಅಪ್ರತಿಮ ಫಾರ್ಮ್ ಅನ್ನು ಸಾಬೀತುಪಡಿಸಿದ್ದಾರೆ. ಈ ಪಂದ್ಯದ ಆರಂಭಕ್ಕೂ ಮುನ್ನ ಕೊಹ್ಲಿಗೆ 28 ಸಾವಿರದ ಕ್ಲಬ್ ಸೇರಲು 25 ರನ್‌ಗಳ ಅಗತ್ಯವಿತ್ತು. ಪಂದ್ಯದ 13ನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದರು. ಈ ಮೂಲಕ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಇದು ವಡೋದರಾದ ಹೊಸ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪುರುಷರ ಏಕದಿನ ಪಂದ್ಯವಾಗಿದ್ದು, ಸುಮಾರು 35,000 ಪ್ರೇಕ್ಷಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಪಂದ್ಯದ ವಿರಾಮದ ಸಮಯದಲ್ಲಿ ಬರೋಡಾ ಕ್ರಿಕೆಟ್ ಅಸೋಸಿಯೇಷನ್ (BCA), ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ವಿಶೇಷ ಗೌರವ ಸಲ್ಲಿಸಿತು. ಕ್ರೀಡಾಂಗಣದ ಬೌಂಡರಿ ಗೆರೆಯ ಬಳಿ ಇಬ್ಬರೂ ಆಟಗಾರರ ವಿಶೇಷ ಸ್ಮರಣಿಕೆಯನ್ನು ಅನಾವರಣಗೊಳಿಸಲಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತು. ಆರಂಭಿಕರಾದ ಡೆವೊನ್ ಕಾನ್ವೇ (56) ಮತ್ತು ಹೆನ್ರಿ ನಿಕೋಲ್ಸ್ (62) ಮೊದಲ ವಿಕೆಟ್‌ಗೆ 117 ರನ್‌ಗಳ ಭದ್ರ ಬುನಾದಿ ಹಾಕಿದ್ದರು. ಆದರೆ, ಭಾರತದ ಯುವ ವೇಗಿ ಹರ್ಷಿತ್ ರಾಣಾ ಅವರ ಮಾರಕ ದಾಳಿಯಿಂದಾಗಿ ಕಿವೀಸ್ ಮಧ್ಯಮ ಕ್ರಮಾಂಕ ಕುಸಿತ ಕಂಡಿತು. ಅಂತಿಮವಾಗಿ ಡ್ಯಾರಿಲ್ ಮಿಚೆಲ್ ಅವರ 84 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ ಸವಾಲ್ ಹಾಕಿತು.
301 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ವಿರಾಟ್ ಕೊಹ್ಲಿ ಆಸರೆಯಾಗಿ, ಕೊಹ್ಲಿ 91 ಎಸೆತಗಳಲ್ಲಿ 93 ರನ್ ಸಿಡಿಸಿ ಶತಕದ ಸನಿಹದಲ್ಲಿ ಔಟಾದರು. ನಾಯಕ ಶುಭಮನ್ ಗಿಲ್ 56 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಅಂತ್ಯದಲ್ಲಿ ಪಂದ್ಯ ತುಸು ರೋಚಕತೆ ಪಡೆದರೂ, ಭಾರತವು 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.





