ಬೆಂಗಳೂರು (ಜ.5): ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಜೀವನದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗುತ್ತಿದೆ. ಫೆಬ್ರವರಿ ಕೊನೆಯಲ್ಲಿ ಅವರು ತಮ್ಮ ಪ್ರೇಯಸಿ, ಐರ್ಲೆಂಡ್ ಮೂಲದ ಸೋಫಿ ಶೈನ್ ಅವರನ್ನು ವಿವಾಹವಾಗಲಿದ್ದಾರೆ.
ಮೂಲಗಳ ಪ್ರಕಾರ, ಶಿಖರ್ ಧವನ್ ಮತ್ತು ಸೋಫಿ ಶೈನ್ ಅವರ ವಿವಾಹ ಸಮಾರಂಭ ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಸಂಭ್ರಮಾಚರಣೆಗೆ ಕ್ರಿಕೆಟ್ ಜಗತ್ತಿನ ದಿಗ್ಗಜರು, ಬಾಲಿವುಡ್ ತಾರೆಯರು ಹಾಗೂ ಆಪ್ತ ಸ್ನೇಹಿತರು ಹಾಜರಾಗಲಿದ್ದಾರೆ ಎನ್ನಲಾಗಿದೆ. ಮದುವೆ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಆದರೆ ದಂಪತಿಗಳು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
“ಇದು ಶಿಖರ್ ಧವನ್ ಅವರ ಜೀವನದ ಹೊಸ ಆರಂಭ. ಅವರು ಈ ಬದಲಾವಣೆಯನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದ್ದಾರೆ” ಎಂದು ಆಪ್ತ ಮೂಲಗಳು ತಿಳಿಸಿವೆ. ಮದುವೆಯ ಪ್ರತಿಯೊಂದು ಯೋಜನೆಯಲ್ಲೂ ಶಿಖರ್ ಸ್ವತಃ ತೊಡಗಿಸಿಕೊಂಡಿದ್ದಾರೆ.
ಸೋಫಿ ಶೈನ್ ಯಾರು?
ಸೋಫಿ ಶೈನ್ ಐರ್ಲೆಂಡ್ ಮೂಲದ ಯುವತಿ. ಅವರು ಶಿಖರ್ ಧವನ್ ಫೌಂಡೇಶನ್‌ನ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಫೌಂಡೇಶನ್, ಧವನ್ ಅವರ ಡಾ. ಒನ್ ಸ್ಪೋರ್ಟ್ಸ್ ಸಂಸ್ಥೆಯ ಸಾಮಾಜಿಕ ಸೇವಾ ವಿಭಾಗವಾಗಿದೆ. ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸೋಫಿ, ಶಿಖರ್ ಅವರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ನಡುವೆ ಶಿಖರ್ ಧವನ್ ಇತ್ತೀಚೆಗೆ ತಮ್ಮ ಆತ್ಮಚರಿತ್ರೆ ‘ದಿ ಒನ್: ಮೈ ಲೈಫ್ ಅಂಡ್ ಮೋರ್’ ಪುಸ್ತಕವನ್ನು ಬಿಡುಗಡೆ ಮಾಡಿದ್ದು, ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ಹಲವು ಅಂಶಗಳನ್ನು ಅದರಲ್ಲಿ ಹಂಚಿಕೊಂಡಿದ್ದಾರೆ. ಪುಸ್ತಕ ಬಿಡುಗಡೆಯ ನಂತರವೇ ಅವರ ವೈಯಕ್ತಿಕ ಜೀವನದ ಬಗ್ಗೆ ಕುತೂಹಲ ಹೆಚ್ಚಾಗಿತ್ತು.
ಸಂಬಂಧದ ಬಗ್ಗೆ ಮೂಡಿದ್ದ ವದಂತಿಗಳು
ಶಿಖರ್ ಮತ್ತು ಸೋಫಿ ಅವರ ಸಂಬಂಧದ ಕುರಿತು ಹಲವು ತಿಂಗಳುಗಳಿಂದ ವದಂತಿಗಳು ಹರಡುತ್ತಲೇ ಇದ್ದವು. ವಿಶೇಷವಾಗಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ, ಧವನ್ ಸ್ಟ್ಯಾಂಡ್‌ನಲ್ಲಿ ಸೋಫಿ ಶೈನ್ ಜೊತೆಗೆ ಕಾಣಿಸಿಕೊಂಡಾಗ ಈ ವದಂತಿಗಳಿಗೆ ಹೊಸ ಜೀವ ಬಂದಿತ್ತು. ಅವರ ಪಕ್ಕದಲ್ಲಿದ್ದ ನಿಗೂಢ ಯುವತಿ ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿತ್ತು.
ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದ ಕೆಲವು ಸುಳಿವುಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಜೊತೆಯಲ್ಲಿ ಕಾಣಿಸಿಕೊಂಡಿರುವುದು ಸಂಬಂಧದ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು. ಆದರೆ, ಈ ಬಗ್ಗೆ ದಂಪತಿಗಳು ಅಧಿಕೃತವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ.
ದುಬೈನಲ್ಲಿ ಆರಂಭವಾದ ಪ್ರೀತಿ
ಶಿಖರ್ ಮತ್ತು ಸೋಫಿ ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದರು. ಮೊದಲಿಗೆ ಸ್ನೇಹವಾಗಿ ಆರಂಭವಾದ ಅವರ ಪರಿಚಯ, ಕ್ರಮೇಣ ಪ್ರೀತಿಗೆ ತಿರುಗಿತು. ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದು, ಜೀವನವನ್ನು ಒಟ್ಟಿಗೆ ಕಟ್ಟಿಕೊಳ್ಳುವ ಬಗ್ಗೆ ಗಂಭೀರ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಶಿಖರ್ ಧವನ್ ಅವರ ಇತ್ತೀಚಿನ ವೃತ್ತಿಪರ ಪಯಣದಲ್ಲಿ ಸೋಫಿ ಸದಾ ಅವರ ಜೊತೆಗಿದ್ದರು. ಐಪಿಎಲ್ 2024ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾಗಲೂ, ಶಿಖರ್ ಹಂಚಿಕೊಂಡ ಹಲವು ಕ್ಷಣಗಳಲ್ಲಿ ಸೋಫಿ ಕಾಣಿಸಿಕೊಂಡಿದ್ದರು.
ಶಿಖರ್ ಧವನ್ ಈ ಹಿಂದೆ ಆಸ್ಟ್ರೇಲಿಯಾ ಮೂಲದ ಆಯೇಷಾ ಮುಖರ್ಜಿ ಅವರನ್ನು ವಿವಾಹವಾಗಿದ್ದರು. ಈ ದಾಂಪತ್ಯದಿಂದ ಅವರಿಗೆ ಜೋರಾವರ್ ಧವನ್ ಎಂಬ 11 ವರ್ಷದ ಮಗನಿದ್ದಾನೆ. ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸಂಕಷ್ಟಗಳ ಬಳಿಕ, ಧವನ್ ಇದೀಗ ಮತ್ತೆ ಹೊಸ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ.





