ಮುಂಬೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಹೌಹಾರುವಂತೆ ಮಾಡಿದೆ. ಒಬ್ಬ ಯುವಕ ರೈಲಿನಲ್ಲಿ ಕುಳಿತು ಹಸಿ ಬದನೆಕಾಯಿ, ಎಲೆಕೋಸು ಮತ್ತು ಟೊಮೆಟೊ ಕೆಚಪ್ ಹಚ್ಚಿದ ಹಸಿ ಶುಂಠಿಯನ್ನು ಸವಿಯುತ್ತಿರುವ ದೃಶ್ಯ ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಯಾರೀ ಯುವಕ ? ಏನಿದು ವಿಡಿಯೋ ?
ಖ್ಯಾತ ಸೋಶಿಯಲ್ ಮೀಡಿಯಾ ವ್ಲಾಗರ್ ಪ್ರಣಯ್ ಜೋಶಿ ಎಂಬುವವರು ಈ ರೀತಿಯ ವಿಡಿಯೋ ಮಾಡಿದ್ದಾರೆ. ಮುಂಬೈ ಲೋಕಲ್ ರೈಲುಗಳಲ್ಲಿ ಇಂತಹ ವಿಭಿನ್ನ ಮತ್ತು ವಿಚಿತ್ರ ಪ್ರಯೋಗಗಳನ್ನು ಮಾಡುವ ಮೂಲಕವೇ ಇವರು ಅಪಾರ ಫಾಲೋವರ್ಸ್ ಗಳಿಸಿದ್ದಾರೆ. ಈ ಬಾರಿ ‘ವಿಭಿನ್ನ ಕಾಂಬಿನೇಶನ್ ಆಹಾರ’. ಇದು ಕೇವಲ ಮನೋರಂಜನೆಯ ಉದ್ದೇಶಕ್ಕಾಗಿ ಮಾಡಿದ ವಿಡಿಯೋ ಆಗಿದ್ದರೂ, ರೈಲಿನಲ್ಲಿದ್ದ ಸಹ ಪ್ರಯಾಣಿಕರ ಮುಖದ ಹಾವಭಾವಗಳು (Expressions) ವಿಡಿಯೋವನ್ನು ಮತ್ತಷ್ಟು ಫನ್ನಿಯಾಗಿಸಿವೆ.
ವಿಚಿತ್ರ ಆಹಾರಗಳ ಮೆನು
ವೈರಲ್ ವಿಡಿಯೋದಲ್ಲಿ ಪ್ರಣಯ್ ಜೋಶಿ ಮೊದಲು ಹಸಿ ಶುಂಠಿಯ ಮೇಲೆ ಟೊಮೆಟೊ ಕೆಚಪ್ ಸುರಿದುಕೊಂಡು, ಅದನ್ನು ಬಹಳ ರುಚಿಕರವಾಗಿದೆ ಎಂಬಂತೆ ಅಗಿಯುತ್ತಾರೆ. ಅಷ್ಟಕ್ಕೇ ನಿಲ್ಲದ ಅವರು, ಪಕ್ಕದಲ್ಲಿದ್ದ ಪ್ರಯಾಣಿಕರ ಬಳಿ ಹೋಗಿ ಬಹಳ ಸೂಪರ್ ಆಗಿದೆ, ನಿಮಗೂ ಬೇಕಾ ? ಎಂದು ಕೇಳಿದಾಗ ಆ ಪ್ರಯಾಣಿಕ ತಬ್ಬಿಬ್ಬಾಗುವ ದೃಶ್ಯ ವೀಕ್ಷರಿಗೆ ನಗು ಬರಿಸುವಂತಿದೆ.
ಇದಾದ ನಂತರ ಅವರು ಹಸಿ ಬದನೆಕಾಯಿಯನ್ನು ನೇರವಾಗಿ ಕಚ್ಚಿ ತಿನ್ನಲು ಆರಂಭಿಸುತ್ತಾರೆ. ಅಷ್ಟೇ ಅಲ್ಲದೆ, ಬಿಸಿ ಚಹಾದಲ್ಲಿ ಬಾಳೆಹಣ್ಣನ್ನು ಅದ್ದಿ ತಿನ್ನುವ ಮತ್ತು ಇಡೀ ಹಸಿ ಎಲೆಕೋಸನ್ನು (ಕ್ಯಾಬೇಜ್) ಸಲಾಡ್‌ನಂತೆ ತಿನ್ನುವ ದೃಶ್ಯಗಳು ಸಹ ಪ್ರಯಾಣಿಕರು ಶಾಕ್ ಆಗುವಂತೆ ಮಾಡಿದೆ.
33 ಮಿಲಿಯನ್ ವೀಕ್ಷಣೆ ಪಡೆದ ರೀಲ್
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 33 ಮಿಲಿಯನ್ (3.3 ಕೋಟಿ) ಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದು ದಾಖಲೆ ಬರೆದಿದೆ. ವಿಡಿಯೋದಲ್ಲಿ ಒಬ್ಬ ಪ್ರಯಾಣಿಕ ನಾವು ಟೊಮೆಟೊವನ್ನಷ್ಟೇ ಹಸಿಯಾಗಿ ತಿನ್ನುತ್ತೇವೆ, ನೀವು ಬದನೆಕಾಯಿ ಏಕೆ ತಿನ್ನುತ್ತಿದ್ದೀರಿ ? ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಇವನೇನು ಇಷ್ಟೊಂದು ವಿಚಿತ್ರವಾಗಿದ್ದಾನೆ ಎಂದು ಒಬ್ಬರನ್ನೊಬ್ಬರು ನೋಡಿಕೊಂಡು ನಗುತ್ತಿದ್ದರೆ, ಇನ್ನು ಕೆಲವರು ಕುತೂಹಲದಿಂದ ಆತ ತಿನ್ನುವುದನ್ನೇ ನೋಡುತ್ತಿದ್ದಾರೆ.
ಈ ವಿಡಿಯೋ ಬಗ್ಗೆ ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಚಹಾದಲ್ಲಿ ಬಾಳೆಹಣ್ಣು ಅದ್ದಿ ತಿನ್ನುವುದು ನಮ್ಮ ಹಿರಿಯರ ಕಾಲದ ರೂಢಿ, ಅದರಲ್ಲಿ ವಿಚಿತ್ರವಿಲ್ಲ. ಆದರೆ ಹಸಿ ಬದನೆಕಾಯಿ ಮತ್ತು ಶುಂಠಿ ತಿನ್ನುವುದು ನಿಜಕ್ಕೂ ಧೈರ್ಯದ ಕೆಲಸ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬದನೆಕಾಯಿ ಮತ್ತು ಕ್ಯಾಬೇಜ್ ಹಸಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು, ಆದರೆ ಈ ರೀತಿ ಸಾರ್ವಜನಿಕವಾಗಿ ತಿನ್ನುವ ಐಡಿಯಾ ಫನ್ನಿಯಾಗಿದೆ ಎಂದಿದ್ದಾರೆ.
ಒಟ್ಟಿನಲ್ಲಿ, ಮುಂಬೈ ಲೋಕಲ್ ರೈಲಿನ ಈ ವಿಚಿತ್ರ ಪ್ರಯೋಗ ಈಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯನ್ನಂತೂ ಹುಟ್ಟುಹಾಕಿದೆ.





