ಹಾಸನ: ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಅವರ ಕುಟುಂಬಕ್ಕೆ ಭೂ ಒತ್ತುವರಿ ಸಂಬಂಧಿಸಿದಂತೆ ದೊಡ್ಡ ಆಘಾತವೊಂದು ಎದುರಾಗಿದೆ. ಹಾಸನ ನಗರದಲ್ಲಿರುವ ಯಶ್ ಕುಟುಂಬದ ಮನೆ ಸುತ್ತ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಅನ್ನು ಕೋರ್ಟ್ ಆದೇಶದ ಮೇರೆಗೆ ಇಂದು ಬೆಳಂಬೆಳಿಗ್ಗೆ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.
ಹಾಸನ ನಗರದ ವಿದ್ಯಾನಗರ ಪ್ರದೇಶದಲ್ಲಿರುವ ಲಕ್ಷ್ಮಮ್ಮ ಎಂಬವರ ಜಾಗದಲ್ಲಿ ನಟ ಯಶ್ ತಾಯಿ ಪುಷ್ಪಾ ಅವರ ಹೆಸರಿನಲ್ಲಿ ಮನೆ ನಿರ್ಮಾಣವಾಗಿತ್ತು. ಮನೆ ಸುತ್ತಲೂ ಸುಮಾರು 1500 ಚದರ ಅಡಿಗಳಷ್ಟು ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಲಾಗಿದೆ ಎಂದು ಜಾಗದ ಮೂಲ ಮಾಲೀಕರು ಆರೋಪಿಸಿದ್ದರು. ಈ ವಿಚಾರವಾಗಿ ಹಲವು ತಿಂಗಳಿಂದ ವಿವಾದ ನಡೆಯುತ್ತಿದ್ದು, ಕೊನೆಗೂ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ಜಾಗದ ಮಾಲೀಕರ ದೂರಿನ ಮೇರೆಗೆ ವಿಚಾರಣೆ ನಡೆಸಿದ ಕೋರ್ಟ್, ಅಕ್ರಮವಾಗಿ ನಿರ್ಮಿಸಲಾದ ಕಾಂಪೌಂಡ್ ತೆರವುಗೊಳಿಸಲು ಆದೇಶ ನೀಡಿತ್ತು. ಈ ಆದೇಶದ ಅನುಸಾರವಾಗಿ ಇಂದು ಅಧಿಕಾರಿಗಳು ಕೋರ್ಟ್‌ನಿಂದ ಅನುಮತಿ ಪಡೆದು ಸ್ಥಳಕ್ಕೆ ಆಗಮಿಸಿದರು. ಪೊಲೀಸ್ ಭದ್ರತೆಯೊಂದಿಗೆ ಜೆಸಿಬಿ ಯಂತ್ರಗಳನ್ನು ಬಳಸಿ ಅಕ್ರಮ ಕಾಂಪೌಂಡ್ ಅನ್ನು ಸಂಪೂರ್ಣವಾಗಿ ಕೆಡವಲಾಯಿತು. ಈ ಕಾರ್ಯಾಚರಣೆ ವೇಳೆ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಿದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಯಶ್ ತಾಯಿ ಪುಷ್ಪಾ ಅವರು ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. “ನಮ್ಮ ಬಳಿ ಜಾಗಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ದಾಖಲೆಗಳೂ ಇವೆ. ನಾವು ಯಾವುದೇ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿಲ್ಲ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಜಾಗದ ವಿಚಾರ ಈಗಾಗಲೇ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಜಾಗದ ಮಾಲೀಕ ದೇವರಾಜು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಪುಷ್ಪಾ ಹೇಳಿದ್ದಾರೆ. “ನೆರೆಹೊರೆಯವರಿಗೂ ಅವರು ಇದೇ ರೀತಿಯ ಬ್ಲಾಕ್ ಮೇಲ್ ಮಾಡಿದ್ದಾರೆ. ನಮ್ಮ ಕುಟುಂಬದ ಮಾನಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಈ ಆರೋಪಗಳನ್ನು ಮಾಡಿದ್ದಾರೆ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಜಾಗ ವಿವಾದ ಹಲವು ವರ್ಷಗಳಿಂದ ಮುಂದುವರಿದಿದ್ದು, ಎರಡೂ ಪಕ್ಷಗಳ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿತ್ತು. ಆದರೆ ಕೋರ್ಟ್ ಆದೇಶದಂತೆ ಇಂದು ನಡೆದ ಕಾಂಪೌಂಡ್ ತೆರವು ಕಾರ್ಯಾಚರಣೆ ಈ ವಿವಾದಕ್ಕೆ ಹೊಸ ತಿರುವು ನೀಡಿದೆ.





