ಬೆಂಗಳೂರು: ನಟ ದರ್ಶನ್ ಮತ್ತು ಆತನ ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಎ1 ಪವಿತ್ರಾಗೌಡಗೆ ಜೈಲಿನೊಳಗೆ ಮತ್ತೊಂದು ಶಾಕ್ ಎದುರಾಗಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ಪವಿತ್ರಾಗೌಡ ಅವರು ಆರೋಗ್ಯ ಕಾರಣಗಳನ್ನು ಮುಂದಿಟ್ಟು ಮನೆ ಊಟ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ ಮನೆ ಊಟ ನೀಡಲು ಅನುಮತಿ ನೀಡಿತ್ತು. ಆದರೆ ಇದೀಗ ಆ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾರಾಗೃಹ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು 4,700ಕ್ಕೂ ಹೆಚ್ಚು ಕೈದಿಗಳು ಒಂದೇ ರೀತಿಯ ಜೈಲು ಆಹಾರ ಸೇವಿಸುತ್ತಿದ್ದಾರೆ. ಈ ಆಹಾರದಿಂದ ಯಾವುದೇ ಕೈದಿಗೂ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿಲ್ಲ ಎಂದು ಕಾರಾಗೃಹ ಇಲಾಖೆ ಸ್ಪಷ್ಟಪಡಿಸಿದೆ. ಜೈಲಿನಲ್ಲಿ ನೀಡುವ ಆಹಾರವು ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿದ್ದು, ಗುಣಮಟ್ಟದಲ್ಲಿಯೂ ಯಾವುದೇ ಕೊರತೆ ಇಲ್ಲ ಎಂಬುದು ಅಧಿಕಾರಿಗಳ ವಾದವಾಗಿದೆ. ಹೀಗಾಗಿ ಕೇವಲ ಪವಿತ್ರಾಗೌಡಗೆ ಮಾತ್ರ ವಿಶೇಷ ಸೌಲಭ್ಯ ನೀಡುವುದು ಸಮಾನತೆಯ ತತ್ವಕ್ಕೆ ವಿರುದ್ಧವಾಗುತ್ತದೆ ಎಂಬ ಕಾರಣ ಮುಂದಿಟ್ಟು, ಕೋರ್ಟ್ ಆದೇಶ ಪ್ರಶ್ನಿಸಲು ಇಲಾಖೆ ಮುಂದಾಗಿದೆ.
ಈ ವಿಚಾರವಾಗಿ ಈಗಾಗಲೇ ಜೈಲು ಅಧಿಕಾರಿಗಳು ವಿಶೇಷ ಸರ್ಕಾರಿ ಅಭಿಯೋಜಕ (SPP) ಅವರೊಂದಿಗೆ ಚರ್ಚೆ ನಡೆಸಿದ್ದು, ಸೋಮವಾರ ನ್ಯಾಯಾಲಯಕ್ಕೆ ಅಧಿಕೃತವಾಗಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮೇಲ್ಮನವಿ ಸಲ್ಲಿಸಿದರೆ, ಪವಿತ್ರಾಗೌಡ ಮಾತ್ರವಲ್ಲದೆ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿರುವ ಇತರ ಕೈದಿಗಳಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪವಿತ್ರಾಗೌಡ ಅವರಿಗೆ ಕೋರ್ಟ್ ಆದೇಶ ಇದ್ದರೂ ಸಹ ಮನೆ ಊಟ ಇನ್ನೂ ಲಭ್ಯವಾಗಿಲ್ಲ. ಕಾರಣ, ನ್ಯಾಯಾಲಯದ ಆದೇಶ ಪ್ರತಿಯು ಕಾರಾಗೃಹ ಇಲಾಖೆಯ ಕೇಂದ್ರ ಕಚೇರಿಗೆ ತಲುಪಿದರೂ, ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳ ಕೈಗೆ ಅಧಿಕೃತವಾಗಿ ಇನ್ನೂ ತಲುಪಿಲ್ಲ. ಜೈಲಾಧಿಕಾರಿಗಳ ಕೈಗೆ ಆದೇಶ ಪ್ರತಿ ತಲುಪಿದ ಬಳಿಕವೇ ಮನೆ ಊಟ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಪವಿತ್ರಾಗೌಡ ಅವರು ಜೈಲು ಊಟವನ್ನೇ ಸೇವಿಸುತ್ತಿದ್ದು, ಜೈಲು ಆಹಾರವು ತಮ್ಮ ಆರೋಗ್ಯಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೊರಗಿದ್ದಾಗ ಐಷಾರಾಮಿ ಜೀವನ ನಡೆಸುತ್ತಿದ್ದ ಪವಿತ್ರಾಗೌಡಗೆ ಇದೀಗ ಜೈಲಿನ ಕಟ್ಟುನಿಟ್ಟಿನ ನಿಯಮಗಳು ಮತ್ತು ಸಾಮಾನ್ಯ ಕೈದಿಗಳಂತೆ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ತಾಯಿಯ ಕೈರುಚಿಯ ಆಹಾರ ಸೇವಿಸಲು ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಪವಿತ್ರಾಗೌಡಗೆ, ಕಾರಾಗೃಹ ಇಲಾಖೆಯ ಮೇಲ್ಮನವಿ ನಿರ್ಧಾರ ಮತ್ತೊಂದು ಶಾಕ್ ನೀಡಿದೆ.





