ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ದಿನೇದಿನೇ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದ ಗಿಲ್ಲಿ ನಟ (Gilli Nata) ಅವರ ಆಡಳಿತವೇ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಗಿಲ್ಲಿ ಕ್ಯಾಪ್ಟನ್ ಪಟ್ಟಕ್ಕೇರಿದ್ದರೂ, ಅವರ ಕಾರ್ಯಶೈಲಿ ಮತ್ತು ತೀರ್ಮಾನಗಳು ಮನೆಮಂದಿಯ ಅಸಮಾಧಾನಕ್ಕೆ ಕಾರಣವಾಗಿವೆ.
ಈ ವಾರ ಬಿಗ್ ಬಾಸ್ ಒಂದು ವಿಶೇಷ ಅವಕಾಶ ನೀಡಿದ್ದರು. ಕಂಟೆಸ್ಟೆಂಟ್‌ಗಳ ಕುಟುಂಬದ ಸದಸ್ಯರಿಗೆ ಕ್ಯಾಪ್ಟನ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಕ್ಕು ನೀಡಲಾಗಿತ್ತು. ಕುಟುಂಬದವರ ಮತದಾನದ ಬಳಿಕ ಗಿಲ್ಲಿಗೆ ಹೆಚ್ಚಿನ ಮತಗಳು ಲಭಿಸಿತ್ತು. ನಂತರ ಬಿಗ್ ಬಾಸ್ ಅಶ್ವಿನಿ ಮತ್ತು ಗಿಲ್ಲಿ ನಡುವೆ ಆಟವೊಂದನ್ನು ನಡೆಸಿದರು. ಆ ಆಟದಲ್ಲಿ ಗೆಲುವು ಸಾಧಿಸಿದ ಗಿಲ್ಲಿ ಮನೆಯ ಕ್ಯಾಪ್ಟನ್ ಆಗಿದರು.
ಆದರೆ ಕ್ಯಾಪ್ಟನ್ ಆದ ನಂತರ ಗಿಲ್ಲಿಯ ವರ್ತನೆ ಮನೆಮಂದಿಗೆ ಇಷ್ಟವಾಗಿಲ್ಲ. ವಿಶೇಷವಾಗಿ ನಾಮಿನೇಷನ್ ವೇಳೆ ಕಾವ್ಯ ಶೈವ ಅವರಿಗೆ ಗಿಲ್ಲಿ ಫೇವರಿಸಂ ತೋರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದರಿಂದಾಗಿ ಇತರ ಸ್ಪರ್ಧಿಗಳು ಗಿಲ್ಲಿಯ ವಿರುದ್ಧ ಕಿಡಿಕಾರಿದ್ದಾರೆ.
ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ “ಗಿಲ್ಲಿಯ ಕ್ಯಾಪ್ಟನ್ಸಿ ಹೇಗಿತ್ತು?” ಎಂದು ಪ್ರಶ್ನಿಸಿದಾಗ ಹಲವು ಸ್ಪರ್ಧಿಗಳು ನೇರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ರಕ್ಷಿತಾ, “ಅವರು ಕ್ಯಾಪ್ಟನ್ ಅಂತ ಅನ್ನಿಸಲೇ ಇಲ್ಲ” ಎಂದು ಹೇಳಿದರೆ, ರಘು “ಅವರಿಗೆ ಜವಾಬ್ದಾರಿತನ ಇರಲಿಲ್ಲ” ಎಂದು ಟೀಕಿಸಿದರು.
ಅಶ್ವಿನಿ ಮಾತನಾಡುತ್ತಾ, “ಒಬ್ಬರಿಗೆ ಅಧಿಕಾರ ಕೊಟ್ಟಾಗ ಅವರೊಳಗಿನ ಅಹಂಕಾರ ಹೇಗೆ ಹೊರಗೆ ಬರುತ್ತೆ ಅನ್ನೋದಕ್ಕೆ ಗಿಲ್ಲಿಯೇ ಸಾಕ್ಷಿ” ಎಂದು ತೀವ್ರ ವಾಗ್ದಾಳಿ ನಡೆಸಿದರು. ಸ್ಪಂದನಾ ಕೂಡ, “ಗಿಲ್ಲಿ ತುಂಬಾ ಟಾಕ್ಸಿಕ್ ಆಗ್ತಿದ್ದಾರೆ ಅನ್ನಿಸೋಕೆ ಶುರು ಆಯ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವಿಚಾರವಾಗಿ ಅಶ್ವಿನಿ ಮತ್ತಷ್ಟು ಮಾತನಾಡಿ, “ನಾನು ಕಪ್ ಗೆದ್ದು ಹೋಗ್ತೀನಿ, ಇನ್ನೊಬ್ಬರನ್ನು ಫಿನಾಲೆಗೆ ಕರೆದುಕೊಂಡು ಹೋಗ್ತೀನಿ ಅಂತ ಸವಾಲ್ ಹಾಕಿದ ಗಿಲ್ಲಿ, ಯಾವ ಸಂದರ್ಭದಲ್ಲೂ ಕಾವ್ಯ ಅವರನ್ನೇ ಸೇಫ್ ಮಾಡ್ತಿದ್ದರು” ಎಂದು ಆರೋಪಿಸಿದರು.
ಈ ವಾರ ಟಾಸ್ಕ್‌ಗಳ ಉಸ್ತುವಾರಿಯನ್ನು ಅಶ್ವಿನಿ ಮತ್ತು ಗಿಲ್ಲಿ ಇಬ್ಬರೂ ವಹಿಸಿಕೊಂಡಿದ್ದರು. ಈ ವೇಳೆ ಹಲವು ಬಾರಿ ಇವರ ನಡುವೆ ಜಗಳಗಳು ನಡೆದಿದ್ದು, ವಾರಾಂತ್ಯದಲ್ಲೂ ಅದು ತಾರಕಕ್ಕೇರಿದೆ. ಗಿಲ್ಲಿ, ಅಶ್ವಿನಿಯ ಯೋಗ್ಯತೆ ಕುರಿತು ಮಾತನಾಡಿದ್ದು ಅಶ್ವಿನಿಯನ್ನು ಇನ್ನಷ್ಟು ಕೆರಳಿಸಿದೆ. ಇದರಿಂದ ಇಬ್ಬರ ನಡುವೆ ಭರ್ಜರಿ ವಾಗ್ಯುದ್ಧವೇ ನಡೆದಿದೆ.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕಿಚ್ಚ ಸುದೀಪ್ ಮುಂದಿನ ಚರ್ಚೆಯಲ್ಲಿ ಯಾವ ರೀತಿ ಸ್ಪಷ್ಟನೆ ಕೇಳುತ್ತಾರೆ, ಗಿಲ್ಲಿ ತಮ್ಮ ನಿಲುವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದೇ ಈಗ ಬಿಗ್ ಬಾಸ್ ವೀಕ್ಷಕರ ಕುತೂಹಲ.





