ನಮ್ಮ ದೇಹದಲ್ಲಿರುವ 5-ಆಲ್ಫಾ ರಿಡಕ್ಟೇಸ್ ಎಂಬ ಕಿಣ್ವವು ಟೆಸ್ಟೋಸ್ಟೆರಾನ್ ಅನ್ನು DHT ಆಗಿ ಪರಿವರ್ತಿಸುತ್ತದೆ. ಈ DHT ಅತಿಯಾದಾಗ ಕೂದಲಿನ ಬುಡ ದುರ್ಬಲಗೊಂಡು ಕೂದಲು ಉದುರಲು ಶುರುವಾಗುತ್ತದೆ. ಇದನ್ನ ತಡೆಯುವ ಶಕ್ತಿ ನಾವು ಸೇವಿಸುವ ಕೆಲವು ನೈಸರ್ಗಿಕ ಆಹಾರಗಳಲ್ಲಿದೆ.
ಕೂದಲ ರಕ್ಷಣೆಗೆ ಸಹಕಾರಿ ಈ ಸೂಪರ್ ಫುಡ್ಸ್:
1. ಕುಂಬಳಕಾಯಿ ಬೀಜಗಳು (Pumpkin Seeds): ಕುಂಬಳಕಾಯಿ ಬೀಜಗಳಲ್ಲಿ ಸತು (Zinc) ಮತ್ತು ಫೈಟೊಸ್ಟೆರಾಲ್‌ಗಳು ಹೇರಳವಾಗಿವೆ. ಇವು ಟೆಸ್ಟೋಸ್ಟೆರಾನ್ DHT ಆಗಿ ಬದಲಾಗುವುದನ್ನು ತಡೆಯುತ್ತವೆ. ಇವುಗಳನ್ನು ಸಲಾಡ್ ಅಥವಾ ಸ್ಮೂಥಿಗಳ ಜೊತೆ ಪ್ರತಿದಿನ ಸೇವಿಸಬಹುದು.
2. ಟೊಮೆಟೊ: ಟೊಮೆಟೊದಲ್ಲಿರುವ ‘ಲೈಕೋಪೀನ್’ ಎಂಬ ಅಂಶವು ಪ್ರಬಲ ಆಂಟಿ-ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಇದು DHT ಮಟ್ಟವನ್ನು ಕಡಿಮೆ ಮಾಡಿ, ಕೂದಲನ್ನ ರಕ್ಷಿಸುತ್ತದೆ.
3. ಗ್ರೀನ್ ಟೀ: ಗ್ರೀನ್ ಟೀಯಲ್ಲಿರುವ ‘EGCG’ ಎಂಬ ಪೋಷಕಾಂಶವು ನೆತ್ತಿಯ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು 5-ಆಲ್ಫಾ ರಿಡಕ್ಟೇಸ್ ಕಿಣ್ವದ ಚಟುವಟಿಕೆಯನ್ನು ಕುಂಠಿತಗೊಳಿಸುತ್ತದೆ. ದಿನಕ್ಕೆ 2 ಕಪ್ ಗ್ರೀನ್ ಟೀ ಕುಡಿಯುವುದು ಕೂದಲ ಆರೋಗ್ಯಕ್ಕೆ ಅತ್ಯುತ್ತಮ.
4. ಕ್ಯಾರೆಟ್ ಮತ್ತು ಸೊಪ್ಪು: ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ಮತ್ತು ಪಾಲಕ್ ಸೊಪ್ಪಿನಲ್ಲಿರುವ ಕಬ್ಬಿಣಾಂಶವು ಕೂದಲ ಬೇರುಗಳಿಗೆ ಬಲ ನೀಡುತ್ತವೆ. ಪಾಲಕ್‌ನಲ್ಲಿರುವ ‘ಕ್ವೆರ್ಸೆಟಿನ್’ ಅಂಶವು ಹಾರ್ಮೋನ್ ಏರುಪೇರನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
5. ಬಾದಾಮಿ ಮತ್ತು ವಾಲ್ನಟ್ಸ್: ವಾಲ್ನಟ್ಸ್ ಮತ್ತು ಬಾದಾಮಿಯಲ್ಲಿ ಬಯೋಟಿನ್, ಎಲ್-ಲೈಸಿನ್ ಮತ್ತು ಆರೋಗ್ಯಕರ ಕೊಬ್ಬಿನಾಮ್ಲಗಳಿವೆ. ಇವು ಕೂದಲಿನ ಪ್ರೋಟೀನ್ ರಚನೆಯನ್ನು ಬಲಪಡಿಸಿ, ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತವೆ.
6. ಒಮೆಗಾ-3 ಸಮೃದ್ಧ ಮೀನುಗಳು: ಸಾಲ್ಮನ್ ಮತ್ತು ಮ್ಯಾಕೆರೆಲ್ ಅಂತಹ ಕೊಬ್ಬಿನ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಯಥೇಚ್ಛವಾಗಿರುತ್ತವೆ. ಇವು ನೆತ್ತಿಯ ಉರಿಯೂತವನ್ನು ಕಡಿಮೆ ಮಾಡಿ ಕೂದಲು ಉದುರುವುದನ್ನು ಗಣನೀಯವಾಗಿ ಇಳಿಸುತ್ತವೆ.
7. ಬೆರ್ರಿ ಹಣ್ಣುಗಳು: ಬ್ಲೂಬೆರ್ರಿ ಮತ್ತು ರಾಸ್ಬೆರ್ರಿಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿರುತ್ತದೆ. ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ, ಕೂದಲಿನ ಎಳೆಗಳು ತುಂಡಾಗುವುದನ್ನು ತಪ್ಪಿಸುತ್ತದೆ.
ಸರಿಯಾದ ಆಹಾರದ ಜೊತೆಗೆ ಹದವಾದ ನಿದ್ರೆ ಮತ್ತು ಒತ್ತಡ ರಹಿತ ಜೀವನಶೈಲಿ ಅಳವಡಿಸಿಕೊಂಡರೆ ಕೂದಲು ಉದುರುವ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು. ಸಮಸ್ಯೆ ತೀವ್ರವಾಗಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.





