ಬೆಂಗಳೂರು, ಡಿಸೆಂಬರ್ 31: ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿಗಳನ್ನು ಹೊಂದಿರುವ ಆರೋಪದ ಹಿನ್ನೆಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಸರ್ವೆ ಸೂಪರ್ವೈಸರ್ ವೆಂಕಟೇಶ್ ಡಿ. ಅವರ ಮನೆ ಹಾಗೂ ಕಚೇರಿಗಳ ಮೇಲೆ ಇಂದು ಬೆಳಿಗ್ಗೆಯಿಂದಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಒಟ್ಟು 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಈ ದಾಳಿ ನಡೆದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಪುವಯ್ಯ ಅವರ ನೇತೃತ್ವದಲ್ಲಿ ಅಧಿಕಾರಿಗಳ ವಿಶೇಷ ತಂಡ ಈ ದಾಳಿಯನ್ನು ನಡೆಸುತ್ತಿದೆ. ಬಸವೇಶ್ವರನಗರದಲ್ಲಿರುವ ವೆಂಕಟೇಶ್ ಅವರ ನಿವಾಸ, ಕಚೇರಿ, ತೋಟದ ಮನೆ ಸೇರಿದಂತೆ ಐದು ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ಪರಿಶೀಲಿಸಲಾಗಿದೆ. ಬೆಳಿಗ್ಗೆಯಿಂದ ದಾಳಿ ಸತತವಾಗಿ ಮುಂದುವರೆದಿದ್ದು, ದಾಖಲೆಗಳು, ಆಸ್ತಿ ಸಂಬಂಧಿತ ಕಡತಗಳು ಹಾಗೂ ಚರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.
ವೆಂಕಟೇಶ್ ಅವರು ತಮ್ಮ ಆದಾಯಕ್ಕೆ ಹೋಲಿಸಿದರೆ ಅಪಾರ ಪ್ರಮಾಣದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವುದು ಬೆಳಕಿಗೆ ಬಂದಿದೆ. ಲೋಕಾಯುಕ್ತ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ದಾಳಿಯ ವೇಳೆ ಸುಮಾರು 90 ಲಕ್ಷ ರೂಪಾಯಿ ಮೌಲ್ಯದ 7 ನಿವೇಶನಗಳು ಪತ್ತೆಯಾಗಿವೆ. ಇದರ ಜೊತೆಗೆ 6 ಎಕರೆ 20 ಗುಂಟೆ ಕೃಷಿ ಭೂಮಿಯೂ ವೆಂಕಟೇಶ್ ಅವರ ಹೆಸರಿನಲ್ಲಿ ಇರುವುದಾಗಿ ದಾಖಲೆಗಳು ಲಭ್ಯವಾಗಿವೆ.
ಚರ ಆಸ್ತಿಗಳ ವಿಚಾರಕ್ಕೆ ಬಂದರೆ, ದಾಳಿಯ ವೇಳೆ 29 ಲಕ್ಷ 410 ರೂಪಾಯಿ ಮೌಲ್ಯದ ಚಿನ್ನಾಭರಣ, 32 ಲಕ್ಷ 40 ಸಾವಿರ ರೂಪಾಯಿ ಮೌಲ್ಯದ ವಿವಿಧ ವಾಹನಗಳು ಪತ್ತೆಯಾಗಿವೆ. ಅಲ್ಲದೆ, ಬ್ಯಾಂಕ್ ಖಾತೆಗಳಲ್ಲಿ ಸುಮಾರು 1 ಲಕ್ಷ 40 ಸಾವಿರ ರೂಪಾಯಿ ಶೇಷ ಮೊತ್ತ ಇರುವುದೂ ಕಂಡುಬಂದಿದೆ. ಮನೆಗಳಲ್ಲಿ ಸಿಕ್ಕ ನಗದು ಮೊತ್ತ 2 ಸಾವಿರ ರೂಪಾಯಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





