ಢಾಕಾ: ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಾಜಿ ಪ್ರಧಾನಿ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಳಗ್ಗೆ 6 ಗಂಟೆಗೆ ಢಾಕಾದ ಅಪೋಲೋ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಪಕ್ಷದ ಪ್ರಕಟಣೆಯ ಪ್ರಕಾರ, ಖಲೀದಾ ಜಿಯಾ ಅವರು ಫಜ್ ಪ್ರಾರ್ಥನೆಯ ನಂತರ ಕೊನೆಯುಸಿರೆಳೆದಿದ್ದಾರೆ. ಕಳೆದ ನವೆಂಬರ್ 23ರಂದು ಹೃದಯ ಮತ್ತು ಶ್ವಾಸಕೋಶ ಸಂಬಂಧಿತ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 36 ದಿನಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೈದ್ಯರ ಎಲ್ಲ ಪ್ರಯತ್ನಗಳ ನಡುವೆಯೂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ.
ಖಲೀದಾ ಜಿಯಾ ಅವರು ಯಕೃತ್ತಿನ ಸಿರೋಸಿಸ್, ಸಂಧಿವಾತ, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ರೋಗಗಳು ಅವರ ಮೂತ್ರಪಿಂಡಗಳು, ಹೃದಯ, ಶ್ವಾಸಕೋಶ ಮತ್ತು ದೃಷ್ಟಿಗೆ ತೀವ್ರ ಪರಿಣಾಮ ಬೀರಿದ್ದವು. ವಯಸ್ಸಿನ ಕಾರಣದಿಂದಾಗಿ ಅವರ ದೇಹವು ಚಿಕಿತ್ಸೆಗೆ ಸ್ಪಂದಿಸುವ ಸಾಮರ್ಥ್ಯ ಕ್ರಮೇಣ ಕಳೆದುಕೊಳ್ಳುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಹೃದಯ ತಜ್ಞ ಡಾ. ಶಹಾಬುದ್ದೀನ್ ತಾಲೂಕ್ಟರ್ ನೇತೃತ್ವದ ವೈದ್ಯಕೀಯ ಮಂಡಳಿ ಅವರ ಚಿಕಿತ್ಸೆಯನ್ನು ನಿರಂತರವಾಗಿ ನೋಡಿಕೊಳ್ಳುತ್ತಿತ್ತು. ಈ ತಂಡದಲ್ಲಿ ಬಾಂಗ್ಲಾದೇಶದ ಜೊತೆಗೆ ಯುಕೆ, ಅಮೆರಿಕಾ, ಚೀನಾ ಮತ್ತು ಆಸ್ಟ್ರೇಲಿಯಾದ ತಜ್ಞ ವೈದ್ಯರೂ ಭಾಗವಹಿಸಿದ್ದರು. ಈ ತಿಂಗಳ ಆರಂಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿದೇಶಕ್ಕೆ ಕರೆದೊಯ್ಯುವ ಬಗ್ಗೆ ಚರ್ಚೆಗಳು ನಡೆದಿತ್ತು. ಆದರೆ ಅವರ ಆರೋಗ್ಯ ಸ್ಥಿತಿಯಿಂದಾಗಿ ಆ ಯೋಜನೆ ಕೈಗೂಡಲಿಲ್ಲ.
ಬಾಂಗ್ಲಾದೇಶದ ರಾಜಕೀಯದಲ್ಲಿ ಖಲೀದಾ ಜಿಯಾ ಅವರು ಅಪಾರ ಪ್ರಭಾವ ಹೊಂದಿದ್ದ ನಾಯಕಿಯಾಗಿದ್ದರು. ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು, ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಮಾಜಿ ಸೇನಾ ಮುಖ್ಯಸ್ಥ ಹಾಗೂ ರಾಷ್ಟ್ರಪತಿ ಝಿಯೌರ್ ರಹಮಾನ್ ಅವರ ಪತ್ನಿಯಾದ ಅವರು, ಅವರ ನಿಧನದ ನಂತರ ಬಿಎನ್‌ಪಿಯನ್ನು ಸಂಘಟಿಸಿ ರಾಜಕೀಯದಲ್ಲೂ ಬೆಳೆಸಿದರು.
ಮುಂದಿನ ವರ್ಷ ನಡೆಯಲಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್‌ಪಿಯ ಭರ್ಜರಿ ಜಯದೊಂದಿಗೆ ಖಲೀದಾ ಜಿಯಾ ಮತ್ತೆ ದೇಶದ ನಾಯಕತ್ವ ವಹಿಸಿಕೊಳ್ಳಬಹುದು ಎಂಬ ನಿರೀಕ್ಷೆ ಪಕ್ಷದೊಳಗೆ ಹಾಗೂ ಬೆಂಬಲಿಗರಲ್ಲಿ ಇತ್ತು. ಆದರೆ ಅವರ ನಿಧನ ಆ ನಿರೀಕ್ಷೆಗಳಿಗೆ ಅಂತ್ಯ ಹಾಡಿದೆ. ಈ ಸುದ್ದಿ ಹೊರಬಿದ್ದ ಕೂಡಲೇ ಬಿಎನ್‌ಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ದೇಶಾದ್ಯಂತ ಶೋಕಾಚರಣೆಗೆ ಮುಂದಾಗಿದ್ದಾರೆ.
ಬಿಎನ್‌ಪಿ ತನ್ನ ಪ್ರಕಟಣೆಯಲ್ಲಿ, “ನಮ್ಮ ಅಧ್ಯಕ್ಷೆ, ಮಾಜಿ ಪ್ರಧಾನಿ ಮತ್ತು ರಾಷ್ಟ್ರೀಯ ನಾಯಕಿ ಬೇಗಂ ಖಲೀದಾ ಜಿಯಾ ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ದೇಶದ ನಾಗರಿಕರು ಎಲ್ಲರೂ ಅವರ ಅಗಲಿದ ಆತ್ಮಕ್ಕಾಗಿ ಪ್ರಾರ್ಥನೆ ಸಲ್ಲಿಸಬೇಕು” ಎಂದು ಮನವಿ ಮಾಡಿದೆ.





