ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ಬೃಹತ್ ಡ್ರಗ್ಸ್ ಫ್ಯಾಕ್ಟರಿ ಪ್ರಕರಣವು ರಾಜ್ಯ ಪೊಲೀಸ್ ಇಲಾಖೆಯೊಳಗೆ ಭಾರೀ ಸಂಚಲನ ಮೂಡಿಸಿದೆ. ಮಹಾರಾಷ್ಟ್ರದ ಆಂಟಿ ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್ (ANTF) ನಡೆಸಿದ ಕಾರ್ಯಾಚರಣೆಯ ಬಳಿಕ, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ. ಕೊತ್ತನೂರು, ಬಾಗಲೂರು ಹಾಗೂ ಅವಲಹಳ್ಳಿ ಪೊಲೀಸ್ ಠಾಣೆಗಳ ಮೂವರು ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರ ಎಎನ್‌ಟಿಎಫ್ ತಂಡವು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ಡ್ರಗ್ಸ್ ತಯಾರಿಕಾ ಘಟಕಗಳನ್ನು ಪತ್ತೆಹಚ್ಚಿ ಸೀಜ್ ಮಾಡಿತ್ತು. ಈ ಕಾರ್ಯಾಚರಣೆಯಲ್ಲಿ ಸುಮಾರು 55.88 ಕೋಟಿ ರೂಪಾಯಿ ಮೌಲ್ಯದ ಎಂಡಿಎಮ್ಎ (MDMA) ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ.
ಆದರೆ ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಪಾತ್ರ ಮತ್ತು ಕರ್ತವ್ಯ ಲೋಪದ ಬಗ್ಗೆ ಗಂಭೀರ ಅನುಮಾನಗಳು ವ್ಯಕ್ತವಾದ ಹಿನ್ನೆಲೆ, ಬೆಂಗಳೂರು ನಗರ ಪೊಲೀಸ್ ಇಲಾಖೆ ತನಿಖೆ ಆರಂಭಿಸಿತ್ತು. ತನಿಖೆಯಲ್ಲಿ, ಡ್ರಗ್ಸ್ ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿದ್ದ ಪ್ರದೇಶಗಳ ವ್ಯಾಪ್ತಿಗೆ ಸೇರಿದ ಪೊಲೀಸ್ ಠಾಣೆಗಳ ಅಧಿಕಾರಿಗಳು ನಿಗಾವಹಿಸದೆ ನಿರ್ಲಕ್ಷ್ಯ ವಹಿಸಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಇದರಿಂದಲೇ ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಅಮಾನತು ಮಾಡಲಾಗಿದೆ.
ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಹೊರಡಿಸಿದ ಆದೇಶದಲ್ಲಿ, “ಮಾದಕ ವಸ್ತುಗಳ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಯಾವುದೇ ರೀತಿಯ ಸಡಿಲತೆ ತೋರಿಸುವಂತಿಲ್ಲ. ಕರ್ತವ್ಯ ಲೋಪ ಅಥವಾ ನಿರ್ಲಕ್ಷ್ಯ ಕಂಡುಬಂದಲ್ಲಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಲಾಗಿದೆ.
ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿಗಳು ಸೀಜ್: 55.88 ಕೋಟಿ ರೂ. MDMA ಪೊಲೀಸ್ ವಶಕ್ಕೆ, ನಾಲ್ವರು ಅರೆಸ್ಟ್
ಬೆಂಗಳೂರು, ಡಿಸೆಂಬರ್ 28: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಾದಕ ದ್ರವ್ಯಗಳ ತಯಾರಿಕೆ ಮತ್ತು ಸಾಗಾಟದ ದೊಡ್ಡ ಜಾಲವನ್ನು ಮಹಾರಾಷ್ಟ್ರದ ಮಾದಕ ವಸ್ತು ನಿಗ್ರಹ ದಳ (ANTF) ಭರ್ಜರಿ ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ANTF ಕೊಂಕಣ ವಿಭಾಗದ ಪೊಲೀಸರು ಬೆಂಗಳೂರಿನ ವಿವಿಧೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ MDMA ಸಿಂಥೆಟಿಕ್ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗೆ ನಡೆದ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಕಾರ್ಯಾಚರಣೆ ಮಾಡಲಾಗಿತ್ತು. ಆ ವೇಳೆ ಬಂಧಿತನಾಗಿದ್ದ ಅಬ್ದುಲ್ಲಾ ಖಾದರ್ ಶೇಕ್ ಎಂಬಾತನ ವಿಚಾರಣೆ ವೇಳೆ, ಡ್ರಗ್ಸ್ ತಯಾರಿಕೆ ಮತ್ತು ಪೂರೈಕೆ ಜಾಲದ ಕುರಿತು ಮಹತ್ವದ ಮಾಹಿತಿಗಳು ಹೊರಬಿದ್ದಿವೆ. ಈ ಸುಳಿವಿನ ಆಧಾರದಲ್ಲಿ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಪಾಟೀಲ್ ನೀಡಿದ ಮಾಹಿತಿ ಮೇರೆಗೆ ಮಹಾರಾಷ್ಟ್ರ ANTF ತಂಡವು ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ದಾಳಿ ನಡೆಸಿತ್ತು. ನಗರದ ಹೊರಮಾವು, ಯರಪ್ಪನಹಳ್ಳಿ ಹಾಗೂ ಕಣ್ಣೂರು ಸಮೀಪದ ಪ್ರದೇಶಗಳಲ್ಲಿ ಗುಪ್ತವಾಗಿ ಡ್ರಗ್ಸ್ ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿದ್ದವು ಎಂಬುದು ಬೆಳಕಿಗೆ ಬಂದಿದೆ. “RJ ಇವೆಂಟ್” ಎಂಬ ಹೆಸರಿನಡಿ ಡ್ರಗ್ಸ್ ತಯಾರಿಕಾ ಕಾರ್ಖಾನೆ ನಡೆಸಲಾಗುತ್ತಿತ್ತು.
ದಾಳಿ ವೇಳೆ ಪೊಲೀಸರು 4.1 ಕೆಜಿ ಘನ (Solid) MDMA ಮತ್ತು 17 ಕೆಜಿ ದ್ರವ (Liquid) MDMA ಸೇರಿ ಒಟ್ಟು 21.4 ಕೆಜಿ ಸಿಂಥೆಟಿಕ್ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಇದರ ಅಂದಾಜು ಮಾರುಕಟ್ಟೆ ಮೌಲ್ಯ 55.88 ಕೋಟಿ ರೂ. ಎಂದು ತಿಳಿದುಬಂದಿದೆ. ಜೊತೆಗೆ ಡ್ರಗ್ಸ್ ತಯಾರಿಕೆಗೆ ಬಳಸಲಾಗುತ್ತಿದ್ದ ಯಂತ್ರೋಪಕರಣಗಳು, ರಾಸಾಯನಿಕ ಪದಾರ್ಥಗಳು ಮತ್ತು ಇತರೆ ಸಾಮಗ್ರಿಗಳನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್ ಮತ್ತು ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯಲ್ಲಿ ರಾಜಸ್ಥಾನ ಮೂಲದ ಯೋಗಿರಾಜ್ ಕುಮಾರ್ ಮತ್ತು ನಯನ್ ಪವರ್ ಎಂಬವರು ಈ ಡ್ರಗ್ಸ್ ಜಾಲದ ಪ್ರಮುಖ ಕಿಂಗ್‌ಪಿನ್‌ಗಳು ಎಂಬ ಮಾಹಿತಿ ಲಭ್ಯವಾಗಿದೆ. ಇವರು ಕೇವಲ ಬೆಂಗಳೂರಲ್ಲಷ್ಟೇ ಅಲ್ಲದೆ, ದೇಶದ ಹಲವು ರಾಜ್ಯಗಳಲ್ಲಿ ಡ್ರಗ್ಸ್ ಫ್ಯಾಕ್ಟರಿಗಳನ್ನು ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.
ಪತ್ತೆಯಾದ ಈ ಫ್ಯಾಕ್ಟರಿಗಳಿಂದ ಮಹಾರಾಷ್ಟ್ರ, ಗೋವಾ, ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳಿಗೆ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಡ್ರಗ್ಸ್ ಜಾಲದ ಇನ್ನಷ್ಟು ಕೊಂಡಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯ ಮುಂದುವರಿಸಿದ್ದಾರೆ.





