ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ’45’ ಸಿನಿಮಾ ಇಂದು (ಡಿಸೆಂಬರ್ 25) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಮ್ಯಾಜಿಕ್ ಮಾಡೋ ರಾಜ್ ಬಿ. ಶೆಟ್ಟಿ ಈ ಮೂವರು ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸಿರುವ ಈ ಚಿತ್ರ, ಪ್ರೇಕ್ಷಕರ ನಿರೀಕ್ಷೆಯನ್ನು ತಲುಪುವಲ್ಲಿ ಯಶಸ್ವಿಯಾಗಿದೆಯೇ ? ಇಲ್ಲಿದೆ ಪಬ್ಲಿಕ್ ರೇಟಿಂಗ್.
’45’ ಸಿನಿಮಾ ಕೇವಲ ಆಕ್ಷನ್ ಚಿತ್ರವಲ್ಲ, ಇದು ಸಾವು ಮತ್ತು ಬದುಕಿನ ನಡುವಿನ ತತ್ವಶಾಸ್ತ್ರವನ್ನು ಸಾರುವ ಕಥೆ. ಗರುಡ ಪುರಾಣದ ಎಳೆಗಳನ್ನು ಆಧರಿಸಿದ ಈ ಚಿತ್ರದಲ್ಲಿ ಜೀವನದ ಮೌಲ್ಯ ಮತ್ತು ಮರಣದ ನಂತರದ ಸತ್ಯಗಳನ್ನು ಅದ್ಭುತವಾಗಿ ಹೆಣೆಯಲಾಗಿದೆ. ಅರ್ಜುನ್ ಜನ್ಯ ಅವರು ಕೇವಲ ಸಂಗೀತದಲ್ಲಷ್ಟೇ ಅಲ್ಲ, ಕಥೆ ಬರೆಯುವುದರಲ್ಲೂ ತಾವು ‘ಮಾಸ್ಟರ್’ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಸಾಮಾನ್ಯವಾಗಿ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ಒಬ್ಬರಿಗೆ ಹೆಚ್ಚು ಪ್ರಾಮುಖ್ಯತೆ ಸಿಕ್ಕರೆ ಮತ್ತೊಬ್ಬರ ಅಭಿಮಾನಿಗಳಿಗೆ ನಿರಾಸೆಯಾಗುತ್ತದೆ. ಆದರೆ ಅರ್ಜುನ್ ಜನ್ಯ ಅವರು ಶಿವಣ್ಣ, ಉಪ್ಪಿ ಮತ್ತು ರಾಜ್ ಬಿ. ಶೆಟ್ಟಿ ಅವರಿಗೆ ಅತ್ಯಂತ ಸಮತೋಲಿತವಾಗಿ ಸ್ಕ್ರೀನ್ ಸ್ಪೇಸ್ ನೀಡಿದ್ದಾರೆ.
ತಾಂತ್ರಿಕತೆ ಮತ್ತು ಗ್ರಾಫಿಕ್ಸ್
ಸಿನಿಮಾದ ಗ್ರಾಫಿಕ್ಸ್ (VFX) ಕೆಲಸದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡ ಸಿನಿಮಾಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಷ್ಟು ಗುಣಮಟ್ಟದ ಗ್ರಾಫಿಕ್ಸ್ ನೋಡಿರಲಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಅರ್ಜುನ್ ಜನ್ಯ ಅವರೇ ಸಂಗೀತ ನೀಡಿರುವುದರಿಂದ ಚಿತ್ರದ ಹಿನ್ನೆಲೆ ಸಂಗೀತ (BGM) ಪ್ರತಿ ದೃಶ್ಯಕ್ಕೂ ಜೀವ ತುಂಬಿದೆ. ಕ್ಲೈಮ್ಯಾಕ್ಸ್ ಹಂತದಲ್ಲಂತೂ ಸಂಗೀತ ಮತ್ತು ಮೇಕಿಂಗ್ ಅದ್ಭುತವಾಗಿ ಮೂಡಿಬಂದಿದೆ.
ಕೌಸ್ತುಭಾ ಮಣಿ ಮತ್ತು ಪ್ರಮೋದ್ ಶೆಟ್ಟಿ ಅವರ ಪಾತ್ರಗಳು ಕಥೆಗೆ ಪೂರಕವಾಗಿವೆ. ಪ್ರಮೋದ್ ಶೆಟ್ಟಿ ಅವರ ನಟನೆ ಎಂದಿನಂತೆ ಪವರ್‌ಫುಲ್ ಆಗಿದೆ. ಸಿನಿಮಾದ ಒಟ್ಟಾರೆ ಥೀಮ್ ಮತ್ತು ಹೊಸತನದ ಪ್ರಯತ್ನಕ್ಕೆ ಪ್ರೇಕ್ಷಕರು ‘ಫುಲ್ ಮಾರ್ಕ್ಸ್’ ನೀಡುತ್ತಿದ್ದಾರೆ.
ಒಟ್ಟಾರೆಯಾಗಿ ’45’ ಒಂದು ಕಂಪ್ಲೀಟ್ ಪ್ಯಾಕೇಜ್. ಸ್ಟಾರ್ ನಟರ ಅಭಿಮಾನಿಗಳಿಗೆ ಮಾತ್ರವಲ್ಲದೆ, ಕಥೆ ಮತ್ತು ಹೊಸ ಪ್ರಯೋಗಗಳನ್ನು ಇಷ್ಟಪಡುವ ಸಿನಿರಸಿಕರಿಗೂ ಇದು ಹೇಳಿ ಮಾಡಿಸಿದ ಚಿತ್ರ.





