ಜಾಗತಿಕ ವ್ಯಾಪಾರ ರಂಗದಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (Free Trade Agreement – FTA) ಮಾತುಕತೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧ ಉತ್ತಮಗೊಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಇಬ್ಬರು ದೂರವಾಣಿ ಮೂಲಕ ಮಾತನಾಡಿ ಈ ಐತಿಹಾಸಿಕ ಒಪ್ಪಂದವನ್ನು ಜಂಟಿಯಾಗಿ ಘೋಷಿಸಿದ್ದಾರೆ.
ಕೇವಲ 9 ತಿಂಗಳಲ್ಲಿ ಒಪ್ಪಂದ:
ವಿಶೇಷವೆಂದರೆ, 2025ರ ಮಾರ್ಚ್‌ನಲ್ಲಿ ಆರಂಭವಾದ ಈ ಮಾತುಕತೆಗಳು ದಾಖಲೆ ಎಂಬಂತೆ ಕೇವಲ ಒಂಬತ್ತು ತಿಂಗಳಲ್ಲಿ ಪೂರ್ಣಗೊಂಡಿವೆ. 2025ರಲ್ಲಿ ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಒಮನ್ ನಂತರ ಭಾರತ ಮಾಡಿಕೊಂಡ ಮೂರನೇ ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದೆ.
ಒಪ್ಪಂದದ ಪ್ರಮುಖ ಅಂಶಗಳು:
ಈ ಒಪ್ಪಂದದ ಅಡಿಯಲ್ಲಿ ನ್ಯೂಜಿಲೆಂಡ್‌ನಿಂದ ಭಾರತಕ್ಕೆ ರಫ್ತಾಗುವ ಶೇ. 95ರಷ್ಟು ಸರಕುಗಳ ಮೇಲಿನ ಆಮದು ಸುಂಕವನ್ನು (Customs Duty) ಗಣನೀಯವಾಗಿ ಕಡಿತಗೊಳಿಸಲಾಗಿದೆ ಅಥವಾ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದು ನ್ಯೂಜಿಲೆಂಡ್‌ನ ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಭಾರತದ ಬೃಹತ್ ಮಾರುಕಟ್ಟೆಯನ್ನು ಮುಕ್ತಗೊಳಿಸಲಿದೆ.
ನಿರೀಕ್ಷಿತ ಆರ್ಥಿಕ ಲಾಭಗಳು:
-
ರಫ್ತು ಏರಿಕೆ: ಮುಂದಿನ ಎರಡು ದಶಕಗಳಲ್ಲಿ ವಾರ್ಷಿಕವಾಗಿ 1.1 ರಿಂದ 1.3 ಬಿಲಿಯನ್ ಡಾಲರ್‌ಗಳಷ್ಟು ರಫ್ತು ಹೆಚ್ಚಾಗುವ ನಿರೀಕ್ಷೆಯಿದೆ.
-
ವ್ಯಾಪಾರ ದ್ವಿಗುಣ: ಮುಂದಿನ ಐದು ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ಈಗಿರುವುದಕ್ಕಿಂತ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ.
-
ಹೂಡಿಕೆ: ಮುಂದಿನ 15 ವರ್ಷಗಳಲ್ಲಿ ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಸುಮಾರು 20 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುವ ಬೃಹತ್ ಯೋಜನೆ ಇದರಲ್ಲಿದೆ.
ಯಾರಿಗೆ ಲಾಭ ? ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ತಿಳಿಸಿರುವಂತೆ, ಈ ಒಪ್ಪಂದವು ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಇದು ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME), ರೈತರು, ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸಲಿದೆ. ಹೂಡಿಕೆ ಮತ್ತು ನಾವೀನ್ಯತೆ ಹೆಚ್ಚಳದಿಂದಾಗಿ ಉದ್ಯೋಗ ಸೃಷ್ಟಿ, ವೇತನ ಹೆಚ್ಚಳ ಮತ್ತು ಹೊಸ ಮಾರುಕಟ್ಟೆ ಅವಕಾಶಗಳು ತೆರೆದುಕೊಳ್ಳಲಿವೆ.
ಭಾರತದ ಜಾಗತಿಕ ವ್ಯಾಪಾರ ಕಾರ್ಯತಂತ್ರದಲ್ಲಿ ಇದು ಮಹತ್ವದ ಹೆಜ್ಜೆಯಾಗಿದ್ದು, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾ ವಲಯದಲ್ಲಿ ಆರ್ಥಿಕ ಸ್ಥಿರತೆಗೆ ಇದು ನಾಂದಿ ಹಾಡಲಿದೆ.





