ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 12’ ಅಂತಿಮ ಹಂತದತ್ತ ಸಾಗುತ್ತಿದೆ. ದಿನಕ್ಕೊಂದು ಟ್ವಿಸ್ಟ್ ನೀಡುತ್ತಿರುವ ಬಿಗ್ ಬಾಸ್, ಈ ವಾರ ವೀಕ್ಷಕರಿಗೆ ಭರ್ಜರಿ ಶಾಕ್ ನೀಡಲು ಹೊರಟಿದೆ.
ಸಾಮಾನ್ಯವಾಗಿ ವೀಕೆಂಡ್ ಬಂತೆಂದರೆ ನೆಚ್ಚಿನ ಸ್ಪರ್ಧಿಯನ್ನು ಉಳಿಸಿಕೊಳ್ಳಲು ವೀಕ್ಷಕರು ವೋಟ್ ಮಾಡುತ್ತಾರೆ. ಆದರೆ ಈ ವಾರ ರಾಶಿಕಾ ಅವರು 5 ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದರೂ, ವೋಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ. ಇದರಿಂದಾಗಿ ಈ ವಾರವೂ ‘ನೋ ಎಲಿಮಿನೇಷನ್’ ಇರಲಿದೆಯೇ ಎಂಬ ಚರ್ಚೆ ಶುರುವಾಗಿದೆ. ಆದರೆ, ಫಿನಾಲೆ ಹತ್ತಿರವಿರುವಾಗ ಸತತವಾಗಿ ಎಲಿಮಿನೇಷನ್ ರದ್ದು ಮಾಡುವುದು ಅಸಾಧ್ಯ. ಹಾಗಾಗಿ, ಈ ವಾರ ‘ಎಕ್ಸ್‌ಪೆಕ್ಟ್ ದಿ ಅನ್ ಎಕ್ಸ್‌ಪೆಕ್ಟೆಡ್’ ಎಂಬಂತೆ ದೊಡ್ಡ ಬದಲಾವಣೆಗಳು ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಎಂದು ನಂಬಲಾಗಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ವಾಸ್ತವದಲ್ಲಿ ಕೇವಲ ಅತಿಥಿಗಳಾಗಿ (Guest Contestants) ಬಂದಿದ್ದಾರಾ ? ಎಂಬ ಅನುಮಾನ ಮೂಡಿದೆ. ಮೂಲಗಳ ಪ್ರಕಾರ, ಈ ವಾರ ಇವರಿಬ್ಬರ ಪಯಣ ಮುಕ್ತಾಯವಾಗಲಿದ್ದು, ಅವರು ಅತಿಥಿಗಳಾಗಿ ಮನೆಗೆ ಬಂದಿದ್ದರಿಂದ ಯಾವುದೇ ಮತದಾನದ ಅಗತ್ಯವಿಲ್ಲದೆ ಅವರನ್ನು ಹೊರಕ್ಕೆ ಕಳುಹಿಸಬಹುದು ಎನ್ನಲಾಗುತ್ತಿದೆ.
ಕಳೆದ ವಾರ ಎಲಿಮಿನೇಟ್ ಆದಂತೆ ನಾಟಕವಾಡಿ ಸೀಕ್ರೆಟ್ ರೂಮ್ ಸೇರಿರುವ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ, ಸದ್ಯ ಮನೆಯವರ ಅಸಲಿ ಮುಖವಾಡಗಳನ್ನು ನೋಡುತ್ತಿದ್ದಾರೆ. ಯಾರು ಯಾರ ಬಗ್ಗೆ ಏನೆಲ್ಲಾ ಮಾತನಾಡುತ್ತಿದ್ದಾರೆ ಎಂಬುದು ಇವರಿಬ್ಬರಿಗೂ ಸ್ಪಷ್ಟವಾಗಿ ತಿಳಿದಿದೆ. ಈ ವಾರ ಸೀಕ್ರೆಟ್ ರೂಮ್‌ನಿಂದ ಇವರಿಬ್ಬರೂ ನೇರವಾಗಿ ಮುಖ್ಯ ಮನೆಗೆ ಎಂಟ್ರಿ ಕೊಡಲಿದ್ದಾರೆ.
ಧ್ರುವಂತ್ ಮತ್ತು ರಕ್ಷಿತಾ ಮರಳಿ ಬಂದ ಮೇಲೆ, ಮನೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ, ಈ ವಾರಾಂತ್ಯದಲ್ಲಿ ಬಿಗ್ ಬಾಸ್ ‘ಡಬಲ್ ಎಲಿಮಿನೇಷನ್’ ದಾಳ ಉರುಳಿಸಿದರೂ ಅಚ್ಚರಿಯಿಲ್ಲ. ಚೈತ್ರಾ ಮತ್ತು ರಜತ್ ಮನೆಯಿಂದ ಹೊರಬರುವುದರ ಜೊತೆಗೆ, ನಾಮಿನೇಟ್ ಆಗಿರುವ ಉಳಿದ ಸ್ಪರ್ಧಿಗಳಲ್ಲಿ ಒಬ್ಬರು ಹೊರಹೋಗುವ ಸಾಧ್ಯತೆಯಿದೆ.
ಒಟ್ಟಿನಲ್ಲಿ, ಈ ವಾರ ಸುದೀಪ್ ಅವರ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಚೈತ್ರಾ ಕುಂದಾಪುರ ಮತ್ತು ರಜತ್ ಅವರ ಅಸಲಿ ಆಟ ಏನು? ಸೀಕ್ರೆಟ್ ರೂಮ್‌ನಿಂದ ಬಂದ ಧ್ರುವಂತ್-ರಕ್ಷಿತಾ ಯಾರ ಮೇಲೆ ಗರ್ಜಿಸಲಿದ್ದಾರೆ ? ಎಂಬುದನ್ನು ಕಾದು ನೋಡಬೇಕಿದೆ.





